ವಿಕಲಚೇತನ ಮಗಳಿಗೆ ಉಣಿಸಲು ತಾನೇ ಖುದ್ದು ರೋಬೋಟ್ ಕಂಡುಹಿಡಿದ ದಿನಗೂಲಿ ಕಾರ್ಮಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ವಿಕಲಚೇತನ ಪುತ್ರಿಗೆ ಆಹಾರ ನೀಡಲು ಅನುಕೂಲವಾಗಲು ದಿನಗೂಲಿ ಮಾಡಿ ಜೀವನ ಸಾಗಿಸುತ್ತಿರುವ ವ್ಯಕ್ತಿಯೋರ್ವರು ಖುದ್ದು ರೋಬೋಟ್ ಸಂಶೋಧನೆ ನಡೆಸಿದ್ದಾರೆ. ದಕ್ಷಿಣ ಗೋವಾದ ಪೊಂಡಾ ತಾಲ್ಲೂಕಿನ ಬೆತೋರಾ ಗ್ರಾಮದ ಬಿಪಿನ್ ಕದಮ್ ಈ ಸಾಧನೆ ಮಾಡಿದ್ದು, ನೂತನ ಆವಿಷ್ಕಾರಕ್ಕೆ ಅಭಿನಂಧನೆಗಳ ಮಹಾಪೂರವೇ ಹರಿದುಬರುತ್ತಿದೆ.

ಒಂದೆಡೆ ಅನಾರೋಗ್ಯ ಪೀಡಿತ ಪತ್ನಿ, ಇನ್ನೊಂದೆಡೆ ವಿಕಲಚೇತನ ಪುತ್ರಿ, ಮತ್ತೊಂದೆಡೆ ತಾನು ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯ ಸ್ಥಿತಿ ತಂತ್ರಜ್ಞಾನದ ಬಗ್ಗೆ ಸಾಸಿವೆ ಕಾಳಿನಷ್ಟೂ ಜ್ಞಾನ ಇಲ್ಲದಿ ಕದಮ್‌ಗೆ ಈ ರೋಬೋಟ್ ಅಭಿವೃದ್ಧಿಪಡಿಸುವ ಸಾಮರ್ಥ್ಯ ನೀಡಿದೆ.
ಕದಮ್ ಅವರ 14 ವರ್ಷದ ಪುತ್ರಿ ಕೈಗಳ ಸ್ವಾಧೀನ ಕಳೆದುಕೊಂಡಿದ್ದಾಳೆ. ಈಕೆಗೆ ಊಟ ಅಮ್ಮನೇ ಉಣಿಸಬೇಕಿದೆ. ಈ ನಡುವೆ ಅಮ್ಮನೂ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದು, ಕದಮ್ ಕೆಲಸಕ್ಕೆ ಹೋಗುವ ಮುನ್ನ ಹಾಗೂ ಕೆಲಸ ಮುಗಿಸಿ ಬಂದ ಬಳಿಕ ಆಕೆಗೆ ಊಟ ನೀಡುವಂತಾಗಿತ್ತು. ಆರಂಭದಲ್ಲಿ ಮಗಳಿಗೆ ಊಟ ನೀಡುವ ರೋಬೋಟ್‌ವೊಂದನ್ನು ಖರೀದಿಗೆ ಮುಂದಾಗಿದ್ದರೂ ಅದು ಫಲಿಸಲಿಲ್ಲ. ಬಳಿಕ ಸುದೀರ್ಘ ಅಧ್ಯಯನ ನಡೆಸಿ ದಿನದ 12 ತಾಸು ಶ್ರಮವಹಿಸಿ ಈ ರೋಬೋಟ್ ಸಿದ್ದಪಡಿಸಿದ್ದಾರೆ. ಇದಕ್ಕೆ ಮುದ್ದಾಗಿ ಮಾ ರೋಬೋಟ್ ಎಂಬ ಹೆಸರನ್ನೂ ಅವರು ಇರಿಸಿದ್ದಾರೆ.

ಕದಮ್ ಅವರ ಹೊಸ ಆವಿಷ್ಕಾರಕ್ಕೆ ಗೋವಾ ರಾಜ್ಯ ಆವಿಷ್ಕಾರ ಮಂಡಳಿ ಶ್ಲಾಘನೆ ವ್ಯಕ್ತಪಡಿಸಿದೆ. ಅಲ್ಲದೆ ಹೆಚ್ಚಿನ ಆವಿಷ್ಕಾರಕ್ಕೂ ಸಲಹೆ ನೀಡಿದ್ದು, ಇದಕ್ಕಾಗಿ ಹಣಕಾಸು ನೆರವು ನೀಡುವ ಭರವಸೆ ಕೂಡಾ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!