ಹೊಸದಿಗಂತ ಡಿಜಿಟಲ್ ಡೆಸ್ಕ್
ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ದೇವಸ್ಥಾನದ ಆವರಣದಲ್ಲಿ ಐಟಂ ಸಾಂಗ್ ಗೆ ಕುಣಿದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಯುವತಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಬಾಲಿವುಡ್‌ನ ಹಿಟ್ ಹಾಡು “ಮುನ್ನಿ ಬದ್ನಾಮ್ ಹುಯಿ” ಟ್ಯೂನ್‌ಗೆ ದೇವಸ್ಥಾನದ ಮೆಟ್ಟಿಲುಗಳ ಮೇಲೆ `ರೀಲ್’ (ಸಣ್ಣ ವಿಡಿಯೋ) ಮಾಡುತ್ತಿರುವ ವೀಡಿಯೊವನ್ನು ಅಕ್ಟೋಬರ್ 1 ರಂದು ಯುವತಿ ನೇಹಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಳು. ಈ ವಿಡಿಯೋ ಗಮನಿಸಿ ಕೆಲ ಬಜರಂಗದಳದ ಸದಸ್ಯರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ ಬಳಿಕ ಅದನ್ನು ಅಳಿಸಿ ಕ್ಷಮೆಯಾಚಿಸಿದ್ದಳು.
ಇನ್‌ಸ್ಟಾಗ್ರಾಮ್‌ನಲ್ಲಿ ನೇಹಾಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ʼನೇಹಾ ಡ್ರೆಸ್ ಮಾಡಿಕೊಂಡ ರೀತಿ ಮತ್ತು ವಿಡಿಯೋ ಚಿತ್ರೀಕರಣ ದೃಶ್ಯಗಳು ಆಕ್ಷೇಪಾರ್ಹವಾಗಿತ್ತು. ನಾನು ಈ ಹಿಂದೆ ಇಂತಹ ಘಟನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದೆ ಮತ್ತು ಅಂತಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಸಹ ಹೇಳಿದ್ದೆವು. ಎಚ್ಚರಿಕೆಯ ಹೊರತಾಗಿಯೂ ಆಕೆ ಈ ರೀತಿ ಮಾಡಿದ್ದಾಳೆ’ ಎಂದು ಮಿಶ್ರಾ ಹೇಳಿದ್ದಾರೆ.
ʼಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಲು ನಾನು ಛತ್ತರ್‌ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ” ಎಂದು ರಾಜ್ಯ ಸರ್ಕಾರದ ವಕ್ತಾರರೂ ಆಗಿರುವ ಸಚಿವರು ಹೇಳಿದರು.
ಭಜರಂಗದಳದ ಕಾರ್ಯಕರ್ತರ ಆಕ್ಷೇಪದ ನಂತರ, ಮಹಿಳೆ ಡ್ಯಾನ್ಸ್ ರೀಲ್ ಅನ್ನು ಅಳಿಸಿ ಹೊಸ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, `ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ’ ಕ್ಷಮೆಯಾಚಿಸಿದ್ದಾಳೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ