ಹೊಸದಿಗಂತ ವರದಿ, ಹಾವೇರಿ:
ನಾವು ಇಂದಿನವರೆಗೆ ಕರ್ನಾಟಕ್ಕಾಗಲಿ, ಭಾರತಕ್ಕಾಗಲಿ ಬಂದಿರಲಿಲ್ಲ. ಇಂತಹ ವೈವಿಧ್ಯಮಯ ನಾಡಿಗೆ ಬರುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಕನ್ನಡದ ಮೊದಲ ಕನ್ನಡ- ಇಂಗ್ಲೀಷ್ ನಿಘಂಟು ರಚನೆಕಾರ ಫರ್ಡಿನಾಂಡ್ ಕಿಟೆಲ್ ಅವರ ಮರಿ ಮೊಮ್ಮಗಳಾದ ಆಲ್ಮುಥ್ ಮೇಯರ್ ಎಂದು ಹೇಳಿದರು.
ನಗರದ ದೇವಧರ ಗುರುಕೃಪಾ ಚರ್ಚ್‌ನಲ್ಲಿ ಗುರುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸುಂದರವಾದ ಹಾಗೂ ಬಣ್ಣ ಬಣ್ಣಗಳಿಂದ ಕೂಡಿದ ಇಲ್ಲಿನ ಸಂಸ್ಕೃತಿ ಕಂಡು ಪರಿಪೂರ್ಣವಾಗಿ ಸಂತುಷ್ಟರಾಗಿದ್ದೇವೆ. ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಿಮ್ಮ ಸತ್ಕಾರವನ್ನು ನೋಡಿ ಭಾವ ತುಂಬಿ ಬಂತು. ಜರ್ಮನಿ ಹಾಗೂ ಭಾರತದ ನಡುವಿನ ಈ ಜರ್ನಿ ಅದ್ಭುತವಾದದ್ದು. ಭಾರತೀಯ ಮಹಿಳೆಯರ ಸೀರೆ ಇತರ ಉಡುಪು ಸುಂದರವಾಗಿದೆ. ನನಗೂ ಒಂದು ಉಡುಗೊರೆ ನೀಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಆಭಾರಿಯಾಗಿವೆ ಎಂದು ತಿಳಿಸಿದರು.
ಕಿಟೆಲ್ ಅವರ ಗಿರಿ ಮೊಮ್ಮಗ ಪ್ಯಾಟ್ರಿಕ್ ಮೇಯರ್ ಮಾತನಾಡಿ, ಕನ್ನಡ ನಾಡಿಗೆ ಆಗಮಿಸಿರುವುದು ನಮಗೆ ತುಂಬ ಸಂತೋಷದ ವಿಷಯವಾಗಿದೆ. ಫರ್ಡಿನಾಂಡ್ ಕಿಟೆಲ್ ಅವರಿಗೆ ಕರ್ನಾಟಕ ಎಂದರೆ ಅಚ್ಚುಮೆಚ್ಚು ಎಂದು ಹೇಳಿದರು.
ನನ್ನ ತಾಯಿ ಆಲ್ಮುಥ್ ಮೇಯರ್ (ಕಿಟೆಲ್ ಮರಿಮೊಮ್ಮಗಳು) ಅವರು ಕಿಟೆಲ್ ಅವರ ಮೂರನೇ ತಲೆಮಾರಿನವರು. ನಾನು ನಾಲ್ಕನೇ ತಲೆಮಾರಿನವನಾಗಿದ್ದು, ಐದನೇ ತಲೆಮಾರಿನ ನನ್ನ ಮಗನಿಗೆ ತಾತನ ಹೆಸರು ಇಟ್ಟಿzನೆ ಎಂದರು.
ಕಿಟೆಲ್ ಅವರು ೨೧ನೇ ವರ್ಷಕ್ಕೆ ಭಾರತಕ್ಕೆ ಬಂದರು. ಮಂಗಳೂರು, ಧಾರವಾಡ ಸೇರಿದಂತೆ ಇತರೆಡೆಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಾಟಕ ಅತಿ ಸುಂದರವಾದ ಪ್ರದೇಶ ಎಂದು ಅವರು ಹೇಳುತ್ತಿದ್ದರಂತೆ. ಸಾಹಿತ್ಯ, ಸಂಗೀತದ ಬಗ್ಗೆ ಅವರು ಅಪಾರ ಒಲವು ಹೊಂದಿದ್ದರು. ಅವರು ರಚಿಸಿದ ಇಂಗ್ಲೀಷ್- ಕನ್ನಡದ ನಿಘಂಟು ಇಷ್ಟೊಂದು ಪ್ರಸಿದ್ಧಿಯಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯ. ಆದರೆ, ದುಖಃಕರ ವಿಚಾರ ಏನೆಂದರೆ ಅವರು ಕಷ್ಟ ಪಟ್ಟು ೫೦ ವರ್ಷಗಳ ಕಾಲ ಬರೆದು ಮುದ್ರಿಸಿದ್ದ ಕನ್ನಡ ನಿಘಂಟು ಅವರ ಕೈಸೇರಿದ ಮರುದಿನವೇ ಅವರು ಇಹಲೋಕವನ್ನು ತೆಜಿಸಿದ್ದು. ಕನ್ನಡಿಗರ ಈ ಪ್ರೀತಿ, ವಿಶ್ವಾಸವನ್ನು ಕಂಡಿದ್ದರೆ ನಿಜಕ್ಕೂ ಅವರು ಅತ್ಯಂತ ಆನಂದ ಪಡುತ್ತಿದ್ದರು ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರು ಕಿಟೆಲ್ ಅವರು ಬರೆದಿದ್ದ ಕನ್ನಡದ ಹಾಡನ್ನು ಹಾಡಿದರು. ಚರ್ಚ್‌ನ ಬಡ ಮಕ್ಕಳಿಗಾಗಿ ಪ್ಯಾಟ್ರಿಕ್ ಮೇಯರ್ ಧನ ಸಹಾಯ ಮಾಡಿದರು.
ಸಮಾರಂಭದಲ್ಲಿ ರೆವರೆಂಡ್ ವಿಜಯ ನಾಯ್ಕರ, ಗುರುಕೃಪಾ ಚರ್ಚ್ ಕಾರ್ಯದರ್ಶಿ ಮನೋಜಕುಮಾರ ಪುನೀತ, ಮಾಧುರಿ ದೇವಧರ, ಪ್ರಶಾಂತ ಬಡಿಗೇರ, ಸಾಗರ, ಸನ್ನು ಖಾನ್, ವಿಕ್ಟರ್ ಪೌಲ್, ಸುಧೀರ ಕತ್ತೆಬೆನ್ನೂರ, ಗೀತಾ ಪುನೀತ, ರೊಮಿಲಾ ದೊಡ್ಡಮನಿ, ಭಾರತಿ ಸವಣೂರ, ಇತರರು ಉಪಸ್ಥಿತರಿದ್ದರು.