ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರು ದೇಶವನ್ನು ಮುನ್ನಡೆಸುವ ಸಾಮರ್ಥ್ಯವಿರುವ ಇಬ್ಬರು “ಪ್ರಮುಖ ಯುವ ನಾಯಕರು” ಎಂದು ಸಂಸದ ಸಂಜಯ್ ರಾವುತ್ ಅಭಿಪ್ರಾಯಪಟ್ಟಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದು ಇತೀಚೆಗೆ ಜೈಲಿನಿಂದ ಹೊರಬಂದಿರುವ ರಾವುತ್, ಗುರುವಾರ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. “ಇಬ್ಬರು ಪ್ರಮುಖ ಯುವ ನಾಯಕರಾದ ರಾಹುಲ್ ಗಾಂಧಿ ಮತ್ತು ಆದಿತ್ಯ ಠಾಕ್ರೆ ಅವರು ಭಾರತ್ ಜೋಡೋಗಾಗಿ ಒಟ್ಟಿಗೆ ನಡೆಯಲಿದ್ದಾರೆ. ಇದು ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಇಬ್ಬರು ಯುವ ನಾಯಕರು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ರಾವುತ್ ಬಣ್ಣಿಸಿದ್ದಾರೆ. ಇದೇ ವೇಳೆ ಶಿವಸೇನೆ ಭಾರತ್ ಜೋಡೋ ಯಾತ್ರೆಯ ಭಾಗವಾಗಿದೆ ಎಂಬ ವಿಚಾರವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಉದ್ಧವ್ ಠಾಕ್ರೆ ಮತ್ತು ವಂಚಿತ್ ಬಹುಜನ ಅಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್ ಅವರ ಒಗ್ಗೂಡುವಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಅವರು(ಪ್ರಕಾಶ್) ಅವರ ತಾತ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಪ್ರಬೋಧನಕರ್ ಠಾಕ್ರೆ ಅವರ ನಡುವೆ ಉತ್ತಮ ಬಾಂಧವ್ಯವಿತ್ತು ಮತ್ತು ಅದು ಈಗ ಪೀಳಿಗೆಗೆ ಹರಡಿದೆ ಎಂದು ರಾವುತ್ ಹೇಳಿದರು. “ಅಂಬೇಡ್ಕರ್ ಮತ್ತು ಠಾಕ್ರೆ ಎರಡು ಶಕ್ತಿಗಳು ಒಟ್ಟಿಗೆ ಸೇರಿದಾಗ, ದೇಶದ ರಾಜಕೀಯ ಬದಲಾಗುವುದನ್ನು ನೀವು ನೋಡುತ್ತೀರಿ” ಎಂದು ರಾವುತ್ ಹೇಳಿದರು. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಾತಾವರಣವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ದೊಡ್ಡ ಶಕ್ತಿಯನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ