ಹೊಸದಿಗಂತ ವರದಿ ಮಡಿಕೇರಿ:
ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವಲ್ಲಿ ಅಧಿಕಾರಿಗಳ ಪಾತ್ರ ಅತಿ ಮುಖ್ಯ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಂ.ಭೃಂಗೇಶ್ ನುಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರ ಕಲಂ 17 ರ ಅಡಿಯಲ್ಲಿ ನೇಮಕವಾದ ವಿವಿಧ ಇಲಾಖೆಗಳ ನಿರೀಕ್ಷಕರುಗಳಿಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಫ್ಯಾಕ್ಟರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
14 ವರ್ಷದ ಕೆಳಗಿನ ಮಕ್ಕಳನ್ನು ದುಡಿಸುವುದು ಅಪರಾಧ. ಚಿಕ್ಕ ಮಕ್ಕಳನ್ನು ಯಾವುದೇ ಕೆಲಸಕ್ಕೆ ಮೀಸಲಿಡಬಾರದು. ಎಲ್ಲಾ ಅಧಿಕಾರಿ ವರ್ಗದವರು ತಮ್ಮ ಕರ್ತವ್ಯ ಪಾಲನೆಯಲ್ಲಿ ತೊಡಗಿಕೊಳ್ಳಬೇಕು. ಇಂತಹ ಕಾರ್ಯಾಗಾರದಿಂದ ತಮ್ಮಲ್ಲಿರುವ ಕೊರತೆ ನೀಗಿಸಲು ಸಹಕಾರಿಯಾಗುತ್ತದೆ ಎಂದರು.
ಅಧಿಕಾರಿಗಳಿಗೆ ತಿದ್ದುಪಡಿ ಕಾಯ್ದೆಗಳ ಬಗ್ಗೆ ಅರಿವು ಇರಬೇಕು. ಇಲ್ಲದಿದ್ದರೆ ಕೆಲಸ ನಿರ್ವಹಿಸಲು ಕಷ್ಟ ಸಾಧ್ಯ ಈ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಅವರು ಮಾತನಾಡಿ ಎಲ್ಲರೂ ಸಮಾನರು ಮತ್ತು ಸಮಾಜದಲ್ಲಿ ಯಾರು ಶೋಷಿತರಾಗಬಾರದೆನ್ನುವುದು ಸಂವಿಧಾನದ ಮುಖ್ಯ ಉದ್ದೇಶವಾಗಿದೆ. ದೇಶದ ಮುಖ್ಯ ಆಸ್ತಿ ಯುವ ಪೀಳಿಗೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಬೇಕು. ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮಕ್ಕಳನ್ನು ಶೋಷಣೆಗೆ ಬಳಸಿಕೊಳ್ಳುವುದನ್ನು ನಿಷೇಧ ಮಾಡಬೇಕು ಎಂದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಮಾತನಾಡಿ ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆ ಕಾರ್ಯ ಅದ್ಭುತವಾದುದು. ಈ ಕಾರ್ಯಕ್ರಮವು ಮಕ್ಕಳನ್ನು ಶೋಷಣೆಯಿಂದ ನಿರ್ಮೂಲನೆ ಮಾಡುವ ಕಾರ್ಯಕ್ರಮವಾಗಿದೆ. ಅಧಿಕಾರಿಗಳು ಇಂತಹ ಕಾರ್ಯಕ್ರಮಗಳ ಮಾಹಿತಿ ಪಡೆದು ತಮ್ಮ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್, ಕೊಪ್ಪಳ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಕೆ. ರಾಘವೇಂದ್ರ ಭಟ್ ಇತರರು ಇದ್ದರು.
ಕಾರ್ಮಿಕ ಇಲಾಖೆಯ ಯಶೋದಾ ಪ್ರಾರ್ಥಿಸಿದರೆ, ಕಾರ್ಮಿಕ ಅಧಿಕಾರಿ ಅನಿಲ್ ಬಿ.ಬಗಟಿ ಅವರು ಸ್ವಾಗತಿಸಿದರು.