ಹೆದ್ದಾರಿ ಅವ್ಯವಸ್ಥೆ: ಸಾರ್ವಜನಿಕರಿಂದ ರಸ್ತೆ ತಡೆ

ಹೊಸದಿಗಂತ ವರದಿ ಕುಶಾಲನಗರ:

ಕುಶಾಲನಗರ ತಾಲೂಕು ವ್ಯಾಪ್ತಿಯ ರಸುಲ್’ಪುರದಿಂದ ದುಬಾರೆವರೆಗೆ ಹದಗೆಟ್ಟಿರುವ ರಾಜ್ಯ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಜನಪ್ರತಿನಿಧಿಗಳು, ಗ್ರಾಮಸ್ಥರು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯ ಹೆದ್ದಾರಿ-91ರ ಗುಡ್ಡೆಹೊಸೂರು-ಸಿದ್ದಾಪುರ ಮಾರ್ಗ ಮಧ್ಯೆ ರಸುಲ್’ಪುರದ ಬಸವೇಶ್ವರ ದೇವಾಲಯ ಬಳಿಯಿಂದ ದುಬಾರೆ ತನಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯುದ್ದಕ್ಕೂ ಬೃಹತ್ ಹೊಂಡಗಳು‌ ನಿರ್ಮಾಣಗೊಂಡಿವೆ. ಈ ಮಧ್ಯೆ ಈ‌ ಮಾರ್ಗದಲ್ಲಿ 3 ಕಿಮೀ ಉದ್ದದ ರಸ್ತೆಯನ್ನು ರೂ 4 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲಾಗಿತ್ತು. ನಾಲ್ಕು ಕಡೆಗಳಲ್ಲಿ ಮೋರಿ ನಿರ್ಮಿಸಿದ ಬಳಿ‌ಕ‌ ಕಾಮಗಾರಿ ಸ್ಥಗಿತಗೊಂಡು ತಿಂಗಳುಗಳೇ ಕಳೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ‌ ನಡುವೆ ಕಾಮಗಾರಿ ಗುತ್ತಿಗೆ ಪಡೆದವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಧೂಳುಮಯವಾಗಿದೆ. ಇದರಿಂದ ಪ್ರಯಾಣಿಕರು, ಪಾದಾಚಾರಿಗಳು, ರಸ್ತೆ ಬದಿ‌ ನಿವಾಸಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಆರೋಪಿಸಿ ಹೊಸಪಟ್ಟಣ ಬಳಿ ಮುತ್ತಪ್ಪ ದೇವಾಲಯ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದಲ್ಲಿ ಗ್ರಾಪಂ ಜನಪ್ರತಿನಿಧಿಗಳು, ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಕೂಡಲೇ ಗುಂಡಿ‌ ಮುಚ್ಚುವ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಲ್.ವಿಶ್ವ, ಈ ಮಾರ್ಗ ಸಂಪೂರ್ಣ ದುಸ್ಥಿತಿಯಿಂದ ಕೂಡಿರುವ ಕಾರಣ ಪ್ರಯಾಣಿಕರಿಗೆ ಸಂಚಕಾರ ಎದುರಾಗಿದೆ. ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ‌ನಡೆದು ಸಾಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ರಸ್ತೆ ನಿರ್ವಹಣೆ ಹೊಣೆ ಹೊತ್ತವರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ ಕಾರಣ ರಸ್ತೆ ಧೂಳುಮಯವಾಗಿದೆ. ಸದ್ಯದಲ್ಲೇ ಎಲ್ಲಾ ರಸ್ತೆಗಳ‌ ಗುಂಡಿ ಮುಚ್ಚಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕದ್ವಯರು ತಿಳಿಸಿದ್ದು ಕೂಡಲೇ ಹೇಳಿದಂತೆ ನಡೆದುಕೊಳ್ಳಬೇಕಿದೆ. 15 ದಿನಗಳ‌ ಒಳಗೆ ಪರಿಹಾರ ಲಭಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಕುಸುಮ, ಜಾಜಿ ತಮ್ಮಯ್ಯ, ಮಾಜಿ ಅಧ್ಯಕ್ಷೆ ಶೈಲಜಾ, ಮಾಜಿ ಸದಸ್ಯ ಜೆ.ಸಿ.ತಮ್ಮಯ್ಯ, ಗ್ರಾಮಸ್ಥರಾದ ಕೆ.ಟಿ.ಹರೀಶ್, ಸುರೇಶ್, ಪ್ರಸನ್ನ, ‌ಎಂ.ಎಚ್.ಉಂಬು, ವೇಲಾಯುಧ, ಸತೀಶ್, ಸನ್ನಿ, ಸುಬ್ಬಪ್ಪ, ಚಂದ್ರಶೇಖರ್, ಮನು, ಮಣಿ, ವಿದ್ಯಾ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!