ಹೊಸದಿಗಂತ ವರದಿ,ಶಿವಮೊಗ್ಗ:
ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿ ಆದೇಶ ಹೊರಡಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ.ರಾಮಮೂರ್ತಿ, ರಾಜ್ಯ ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕ ಶ್ರೀಕಾಂತ ಬಿ.ವನಹಳ್ಳಿ ಸದಸ್ಯರು. ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ. ಈ ಸಂಬಂಧ ಆರ್ಥಿಕ ಇಲಾಖೆಯಿಂದ ಆದೇಶ ಹೊರಬಿದ್ದಿದೆ ಎಂದರು.
ಐದು ವರ್ಷಕ್ಕೂ ಮುನ್ನವೇ ಆಯೋಗ.
ಪ್ರತಿ 5 ವರ್ಷಕ್ಕೆ ಒಮ್ಮೆ ವೇತನ ಆಯೋಗ ರಚನೆ ಆಗಬೇಕು ಎಂದಿದೆ. ಆದರೆ ಹಿಂದೆಲ್ಲಾ 6-7 ವರ್ಷಕ್ಕೆಲ್ಲಾ ಆಯೋಗ ರಚನೆ ಆಗಿದೆ. ಆಯೋಗ ರಚಿಸುವಂತೆ ಮುಷ್ಕರ, ಹೋರಾಟಗಳೂ ನಡೆದಿವೆ. ಈ ಬಾರಿ ಅದಾವುದೂ ಇಲ್ಲದೇ ಕೇವಲ 4 ವರ್ಷ 7 ತಿಂಗಳ ಅವಯಲ್ಲಿ ಆಯೋಗ ರಚನೆ ಆಗಿದೆ. ಇದೊಂದು ದಾಖಲೆ ಆಗಿದೆ ಎಂದರು.
ಹಿಂದೆಲ್ಲಾ ಆಯೋಗಗಳಿಗೆ ನೌಕರರ ಮೂಲ ಸೌಕರ್ಯ, ನಡಾವಳಿ ಸು‘ಾರಣೆ, ವೇತನ- ಭತ್ಯೆ ಹೆಚ್ಚಳಕ್ಕೆ ವರದಿ ನೀಡುವಂತೆ ಕೋರಲಾಗುತ್ತಿತ್ತು. ಈ ಬಾರಿ ಕೇವಲ ವೇತನ ಮತ್ತು ಭತ್ಯೆ ಸಂಬಂಧ ವರದಿ ನೀಡಲು ಸೂಚಿಸಲಾಗಿದೆ. ಹಾಗಾಗಿ ಐದಾರು ತಿಂಗಳ ಒಳಗೇ ವರದಿ ನೀಡಲು ಸಾಧ್ಯವಿದೆ. ಹಾಗಾದಲ್ಲಿ ಮಾರ್ಚ್ ವೇಳೆಗೆ ವೇತನ ಆಯೋಗದ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.