ಹೊಸದಿಗಂತ ವರದಿ,ಮೈಸೂರು:
ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ತಿಳಿಸಿದರು.
ಶನಿವಾರ ಮಧ್ಯಾಹ್ನ ಮೈಸೂರಿನ ವಿಜಯನಗರ ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಬೂತ್ ಸಶಕ್ತೀಕರಣ , ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು, ಬಿ.ಎಲ್.ಎ-2 ರವರೊಂದಿಗೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವು ಎಂದೆoದೂ ಕಾಣದ ಪ್ರಗತಿಯನ್ನು ರಾಜ್ಯದಾದ್ಯಂತ, ದೇಶದಾದ್ಯಂತ ಎಲ್ಲಾ ಕ್ಷೇತ್ರದಲ್ಲೂ ಕೈಗೊಂಡಿದೆ. ಸಾರ್ವಜನಿಕರಿಗೆ ಅತ್ಯಂತ ಸಮೀಪದಲ್ಲಿರುವ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರಧಾನ ಮಂತ್ರಿಗಳ, ಮುಖ್ಯ ಮಂತ್ರಿಗಳ ವಿಶೇಷ ಯೋಜನೆಗಳು, ಶಾಸಕರ ಜನಸ್ನೇಹಿ ಪರಿಶ್ರಮ, ಅಭಿವೃದ್ದಿ ಕಾಮಗಾರಿಗಳ ಕುರಿತಂತೆ ಪ್ರತಿ ಮನೆಯ ಪ್ರತಿ ಸದಸ್ಯನಿಗೆ ಮನವರಿಕೆ ಮಾಡಿಕೊಡಬೇಕು. ಸಾರ್ವಜನಿಕರಿಗೆ ನೈಜ ಪರಿಸ್ಥಿತಿ ಕುರಿತು ತಿಳುವಳಿಕೆ ಹೇಳಬೇಕೆಂದರು. ಎಲ್ಲಾ ಮತದಾರರು, ಸುಶಿಕ್ಷಿತರು, ಯುವಕರಿಗೆ ಭಾರತೀಯ ಜನತಾ ಪಕ್ಷದ ಧ್ಯೇಯ ಉದ್ದೇಶದ ಕುರಿತು ಮಾಹಿತಿ ನೀಡುವ ಕೆಲಸ ಮಾಡಿ, ಮುಂದೆಯೂ ಬಹುಮತ ಸರ್ಕಾರ ಬರಲು ಶ್ರಮಿಸಬೇಕು ಎಂದು ತಿಳಿಸಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಚಾಮರಾಜ ಕ್ಷೇತ್ರವು ಕಳೆದ 25 ವರ್ಷಗಳಿಂದ ಭಾ.ಜ.ಪ ಭದ್ರ ಕೋಟೆಯಾಗಿದ್ದು, ಯಾವುದೇ ಚುನಾವಣೆಯಲ್ಲೂ ಪಕ್ಷಕ್ಕೆ ಹೆಚ್ಚು ಮತ ತಂದು ಕೊಡುವ ಕ್ಷೇತ್ರವಾಗಿದೆ. ಇದಕ್ಕೆ ಕಾರ್ಯಕರ್ತರ ಪರಿಶ್ರಮ ಕಾರಣ. ಈ ಬಾರಿ ಚಾಮರಾಜ ಕ್ಷೇತ್ರದಲ್ಲಿ ಹಿಂದೆoದೂ ಕಾಣದ ಅತಿ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸುಮಾರು 600 ಕೋಟಿಯಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ. ಇದಕ್ಕೆಲ್ಲ ಕಾರಣ ಪಕ್ಷ ಹಾಗೂ ಮುಖ್ಯ ಮಂತ್ರಿಗಳು. ಅವರಿಗೆ ಹಾಗೂ ತಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ, ಈ ಬಾರಿಯ ಪ್ರಗತಿಯ ವಿವರಗಳನ್ನು ಕ್ಷೇತ್ರದ ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿ ತಮ್ಮದ್ದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್. ವತ್ಸ, ಚಾಮರಾಜ ಕ್ಷೇತ್ರದ ಭಾ.ಜ.ಪ ಇತಿಹಾಸ, ಬೂತ್ ಸಮಿತಿ ಪದಾಧಿಕಾರಿಗಳ ಜವಾಬ್ಧಾರಿ ಕುರಿತಂತೆ ಮಾಹಿತಿ ನೀಡಿದರು.
ಚಾಮರಾಜ ಕ್ಷೇತ್ರದ ಉಸ್ತುವಾರಿ ಮೈ.ವಿ.ರವಿಶಂಕರ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ ರಾಜು, ಚಾಮರಾಜ ಬಿ.ಎಲ್.ಎ-1 ದಿನೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಗಳಾದ ಪುನೀತ್, ರಮೇಶ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಸುಬ್ಬಯ್ಯ, ರಂಗಸ್ವಾಮಿ, ಬು ವಿ.ರವೀಂದ್ರ, ವೇದಾವತಿ, ಚಿಕ್ಕಾವೆಂಕಟು, ಮಾಜಿ ಸದಸ್ಯರುಗಳಾದ ಗಿರೀಶ್ ಪ್ರಸಾದ್, ಶ್ರೀರಾಮ್, ದೇವರಾಜು, ಹಾಗೂ ವಿವಿಧ ಪದಾಧಿಕಾರಿಗಳು, ಉಪಸ್ಥಿತರಿದ್ದರು, ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ 245 ಬೂತ್ ಗಳ, ಸುಮಾರು 800 ಪದಾಧಿಕಾರಿಗಳು ಹಾಜರಿದ್ದರು.