ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾಗುವುದರೊಳಗೆ ಎರಡು ಕಿಲೋಮೀಟರ್ ರಸ್ತೆ ಕಣ್ಮರೆಯಾಗಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ, ಬಿಹಾರದ ಹಳ್ಳಿಯೊಂದರ ವ್ಯಾಪ್ತಿಯಲ್ಲಿ ರಸ್ತೆ ಮಾಯವಾಗಿದೆ. ಸಂಜೆ ಅದೇ ರಸ್ತೆಯಲ್ಲಿ ಓಡಾಡಿದ್ದ ಗ್ರಾಮಸ್ಥರು ಬೆಳಗ್ಗೆ ಎಚ್ಚರಗೊಂಡಾಗ ರಸ್ತೆ ಮಂಗಮಾಯವಾಗಿದೆ.
ಬಿಹಾರದ ಬಂಕಾ ಜಿಲ್ಲೆಯ ರಾಜೌನ ಖರೌನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖರೌನಿ ಮತ್ತು ಕದಂಪುರ ಗ್ರಾಮಗಳನ್ನು ಸಂಪರ್ಕಿಸುವ ಎರಡು ಗ್ರಾಮಗಳ ನಡುವೆ ಎರಡು ಕಿಲೋಮೀಟರ್ ರಸ್ತೆ ಇದೆ. ಈ ಎರಡು ಗ್ರಾಮಗಳ ಜನರು ಹಿಂದಿನಿಂದಲೂ ಈ ರಸ್ತೆಯನ್ನು ಬಳಸುತ್ತಿದ್ದಾರೆ. ಆದರೆ, ಇದೀಗ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ರಸ್ತೆ ಹೊಲವಾಗಿ ಮಾರ್ಪಟ್ಟಿದೆ. ಈ ಹೊಲದಲ್ಲಿ ಗೋಧಿ ಬೆಳೆ ಬಿತ್ತಿದ್ದರು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದು, ಹಿಂದಿನ ರಾತ್ರಿ ಬಳಸಿದ್ದ ರಸ್ತೆ ಏಕಾಏಕಿ ಹೊಲವಾಗಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ನಂತರ ಅಸಲಿ ವಿಷಯ ಬೆಳಕಿಗೆ ಬಂದಿದ್ದು, ಖರೌನಿ ಗ್ರಾಮದ ಕೆಲ ಗೂಂಡಾಗಳು ರಸ್ತೆಯನ್ನು ಧ್ವಂಸಗೊಳಿಸಿ ಗದ್ದೆಯಾಗಿ ಪರಿವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.
ಕದಂಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಗೂಂಡಾಗಳು ಜನರನ್ನು ಬೆದರಿಸಿ ದೊಣ್ಣೆ ಮತ್ತು ರಾಡ್ಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಕುರಿತು ತನಿಖೆ ನಡೆಸಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಮತ್ತೆ ರಸ್ತೆ ನಿರ್ಮಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.