ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಂಪ್ ವೆಲ್ ಬಾರ್ ಬಳಿ ಶಿವರಾಜ್ ಹೆಸರಿನ ವ್ಯಕ್ತಿಗೆ ನೋಟಿನ ಕಟ್ಟುಗಳಿದ್ದ ಒಂದು ಪೆಟ್ಟಿಗೆ ಸಿಕ್ಕಿದೆ. ಮದ್ಯವ್ಯಸನಿಯಾಗಿರುವ ಶಿವರಾಜ್ ಆ ಹಣ ಸಿಕ್ಕ ಖುಷಿಯಲ್ಲಿ ಪೆಟ್ಟಿಗೆಯಿಂದ ಒಂದು ಸಾವಿರ ಹಣ ಎತ್ತಿಕೊಂಡು ಗೆಳೆಯನೊಂದಿಗೆ ಬಾರ್ ಗೆ ಹೋಗಿ ಕುಡಿದಿದ್ದಾರೆ. ಆದರೆ ಸಿಕ್ಕಿದ ಹಣ ಅರ್ಧ ಗಂಟೆಯಲ್ಲಿಯೇ ಪೊಲೀಸರ ಪಾಲಾಯಿತು.
ಹೌದು, ಕನ್ಯಾಕುಮಾರಿ ಮೂಲದ ಶಿವರಾಜ್ ಎಂಬಾತ ಬೋಂದೆಲ್ನ ಕೃಷ್ಣನಗರದ ನಿವಾಸಿ ಆಗಿದ್ದು, ಮೆಕ್ಯಾನಿಕ್ ಆಗಿದ್ದನು . ಆತ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದನು.
ಹೀಗೆ ನವೆಂಬರ್ 27ರಂದು ಪಂಪ್ವೆಲ್ ಮೇಲ್ಸೇತುವೆ ಸಮೀಪದ ವೈನ್ ಶಾಪ್ನಲ್ಲಿ ಕುಡಿದು ಹೊರ ಬರುವಾಗ ಪಾರ್ಕಿಂಗ್ ಜಾಗದಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿಗಳ ಬಂಡಲ್ ಸಿಕ್ಕಿತ್ತು. ಹಣ ಕಂಡ ಕೂಡಲೇ ಆತ ಕುಡಿದ ಮತ್ತಿನಲ್ಲಿ ಪೆಟ್ಟಿಗೆಯಿಂದ ನೋಟ್ ಗಳ ಒಂದು ಕಟ್ಟು ತೆಗೆದು ತನ್ನ ಸ್ನೇಹಿತನಿಗೆ ದಾನ ಮಾಡಿದ್ದಾರೆ. ಬಳಿಕ ಇಬ್ಬರು ಮದ್ಯ ಸೇವಿಸಲು ತೆರಳಿದ್ದಾರೆ. ಅಷ್ಟರಲ್ಲಿ ಶಿವರಾಜ್ ಗೆ ಹಣ ಸಿಕ್ಕ ಸುಳಿವು ಪೊಲೀಸರಿಗೆ ಸಿಕ್ಕು ಅವರನ್ನು ಠಾಣೆಗೆ ಕರೆದೊಯ್ದು ಪೆಟ್ಟಿಗೆ ಕಸಿದುಕೊಂಡಿದ್ದಾರೆ.
ಇನ್ನು ಹೀಗೆ ಬೀದಿಯಲ್ಲಿ ಸಿಕ್ಕ ಹಣ ಯಾರದ್ದು? ವಾರಸುದಾರರು ಯಾರಾದರೂ ಹಣ ಕಳೆದುಕೊಂಡ ಬಗ್ಗೆ ದೂರು ನೀಡಲಾಗಿದೆಯೇ ಎಂದರೆ ಈವರೆಗೂ ಯಾರೊಬ್ಬರು ಹಣ ಕಳೆದುಕೊಂಡ ಬಗ್ಗೆ ದೂರು ಬಂದಿಲ್ಲ. ಕುಡುಕನಿಗೆ ಸಿಕ್ಕಿದ್ದ ಹತ್ತು ಲಕ್ಷ ರೂ. ಪೊಲೀಸರ ಪಾಲಾಯ್ತಾ ಎಂಬ ಪ್ರಶ್ನೆಯೂ ಮೂಡಿದೆ. ಘಟನೆ ನಡೆದು ವಾರ ಕಳೆದರೂ ಹಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಹೀಗಾಗಿ ಸಿಕ್ಕ ಹಣವು ಪೊಲೀಸರ ಪಾಲಾಯ್ತಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.