ಹೊಸದಿಗಂತ ವರದಿ, ಶಿರಸಿ:
ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಯ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳಿಗಿಂತ ಜನರ ಅಭಿಪ್ರಾಯ ಮುಖ್ಯ. ಈ ಕುರಿತು ಜನರ ಅಭಿಪ್ರಾಯ ಸಂಗ್ರಹವಾಗಬೇಕು ಎಂದು ಹಳಿಯಾಳ ಶಾಸಕ ಆರ್. ವಿ ದೇಶಪಾಂಡೆ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆ ಬೌಗೋಳಿಕವಾಗಿ ವಿಸ್ತಾರವಾಗಿರುವ ಕಾರಣ ಅಭಿವೃದ್ಧಿ ಆಗಿಲ್ಲ ಎನ್ನುವ ವಾದವನ್ನು ಒಪ್ಪಲಾಗದು. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಸುದೀರ್ಘ ಆಡಳಿತ ನಡೆಸಿದ್ದೇನೆ. ಸಾಕಷ್ಟು ಅಭಿವೃದ್ಧಿಯೂ ಆಗಿದೆ. ಇನ್ನು ಕೆಲ ಕಡೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಭಿವೃದ್ಧಿ ಆಗದೆಯೂ ಇರಬಹುದು. ಆದರೆ ಪ್ರತ್ಯೇಕ ಜಿಲ್ಲೆಗಾಗಿ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬೇಕು. ಜನರ ಅಭಿಪ್ರಾಯ ನೋಡಿಕೊಂಡು ಪ್ರತ್ಯೇಕ ಜಿಲ್ಲೆ ರಚನೆಗೆ ಮುಂದಾಗಬೇಕು ಎಂದರು.
ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಗೆ ಜನರ ಒತ್ತಡವಿದ್ದು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಈಚೆಗಷ್ಟೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯಲ್ಲಿ ಹೇಳಿದ್ದರು. ಪ್ರತ್ಯೇಕ ಜಿಲ್ಲೆ ರಚನೆಯ ವಿಚಾರವಾಗಿ ತಾನು ಧ್ವನಿ ಎತ್ತಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ಬದಲಾಗುವುದು ಕೂಡ ಅನಿವಾರ್ಯ. ಈ ಬಗ್ಗೆ ಬುದ್ಧಿಜೀವಿಗಳು, ಶಾಸಕರೊಂದಿಗೆ ಚರ್ಚಿಸಿ ಅಭಿಪ್ರಾಯ ಆಲಿಸುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶನಿವಾರ ಅಂಕೋಲಾದಲ್ಲಿ ಹೇಳಿಕೆ ನೀಡಿದ್ದರು.