ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದಿವಸ್…1971 ಡಿಸೆಂಬರ್ 16 ಪಾಕಿಸ್ತಾನದ ವಿರುದ್ಧ ಭಾರತ ಗೆಲುವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಭಾರತೀಯ ಸೈನಿಕರ ಶೌರ್ಯವನ್ನು ಸ್ಮರಿಸಿ ಅವರಿಗೆ ವಂದಿಸುವ ದಿನ. ಪ್ರತಿ ವರ್ಷ ಈ ದಿನದಂದು ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುವ ದಿನವಾಗಿದೆ.
ಇತಿಹಾಸ
ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ವಿಜಯದ ಸ್ಮರಣಾರ್ಥ ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. ಆ ಸಮಯದಲ್ಲಿ, ಪೂರ್ವ ಪಾಕಿಸ್ತಾನದ ಪಕ್ಷ ಅವಾಮಿ ಲೀಗ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಪಾಕಿಸ್ತಾನದಲ್ಲಿ ವಿವಾದ ಭುಗಿಲೇಳಲು ಕಾರಣವಾಯಿತು. ಪರಿಣಾಮವಾಗಿ, ಬಂಗಾಳಿ ಮತ್ತು ಪಾಕಿಸ್ತಾನದ ಹಿಂದೂ ನಿವಾಸಿಗಳ ಮೇಲೆ ಪಾಕ್ ಸೇನೆ ತನ್ನ ಆಕ್ರಮಣವನ್ನು ಮುಂದುವರೆಸಿತು. ಅಷ್ಟೇ ಅಲ್ಲ. ಭಾರತದ 11 ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ, ಆಗಿನ ಸೇನಾ ಮುಖ್ಯಸ್ಥ ಜನರಲ್ ಶ್ಯಾಮ್ ಮಾನೆಕ್ಲಾ ಅವರಿಗೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಆದೇಶಿಸಿದರು. 13 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತೀಯ ಸೇನೆ ಮಕಾಡೆ ಮಲಗಿಸಿತ್ತು.
ಪಾಕ್ ಸೇನೆಯ ಶರಣಾಗತಿ
ಸುಮಾರು ಹದಿಮೂರು ದಿನಗಳ ನಡೆದ ಯುದ್ಧದಲ್ಲಿ ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ಡಿ.16ರಂದು 93 ಸಾವಿರ ಸೈನಿಕರೊಂದಿಗೆ ಸೈನಿಕರು ಭಾರತದ ಮುಂದೆ ಶರಣಾದರು. ಇದನ್ನು ಭಾರತದ “ಗ್ರೇಟೆಸ್ಟ್ ಎವರ್ ವಿಕ್ಟರಿ” ಎಂದು ಕರೆಯಲಾಗುತ್ತದೆ. ಆ ಯುದ್ಧದಲ್ಲಿ ಸುಮಾರು 3,900 ಭಾರತೀಯ ಸೈನಿಕರು ಹುತಾತ್ಮರಾಗಿ, ಸುಮಾರು 9,851 ಮಂದಿ ಗಾಯಗೊಂಡರು ಎಂದು ಹೇಳಲಾಗುತ್ತದೆ. ಡಿಸೆಂಬರ್ 16, 1971 ರಂದು ಯುದ್ಧವು ಕೊನೆಗೊಂಡು ಪಾಕ್ ವಿರುದ್ಧ ಭಾರತ ಗೆಲುವು ಸಾಧಿಸಿದ್ದರಿಂದ ಭಾರತವು ಪ್ರತಿ ವರ್ಷ ಆ ದಿನವನ್ನು ವಿಜಯ ದಿನವನ್ನಾಗಿ ಆಚರಿಸುತ್ತದೆ.
ಬಾಂಗ್ಲಾ ವಿಮೋಚನಾ ದಿನ
ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ ದೇಶವು ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನಗಳನ್ನು ಒಳಗೊಂಡಿತ್ತು. ಬಾಂಗ್ಲಾದೇಶವನ್ನು ಆಗ ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಪೂರ್ವ ಪಾಕಿಸ್ತಾನದ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಬಂಗಾಳಿ ಸೈನಿಕರು, ಅರೆಸೇನಾ ಪಡೆಗಳು, ಈಸ್ಟ್ ಬೆಂಗಾಲ್ ರೆಜಿಮೆಂಟ್ ಮತ್ತು ಈಸ್ಟ್ ಪಾಕಿಸ್ತಾನ್ ರೈಫಲ್ಸ್ ಪಾಕಿಸ್ತಾನದ ಸೇನೆಯ ವಿರುದ್ಧ ಬಂಡಾಯವೆದ್ದು ತಮ್ಮನ್ನು ಸ್ವತಂತ್ರವೆಂದು ಘೋಷಿಸಿಕೊಂಡರು. ಬಾಂಗ್ಲಾದೇಶ ಹೊಸ ದೇಶವಾಗಿ ಹೊರಹೊಮ್ಮಲು ಭಾರತ ಸಹಾಯ ಮಾಡಿದ್ದರಿಂದ ಅಂದಿನಿಂದ ಪಾಕಿಸ್ತಾನ ಕೆಂಡ ಕಾರುತ್ತಿದೆ. ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಬಾಂಗ್ಲಾದೇಶವನ್ನು ಹೊಸ ರಾಷ್ಟ್ರವಾಗಿ ಘೋಷಿಸಲು ಪಾಕ್ ಒಪ್ಪಿಗೆ ಸೂಚಿಸಿತು. ಪಾಕಿಸ್ತಾನಿ ಸಶಸ್ತ್ರ ಪಡೆಗಳ ಈಸ್ಟರ್ನ್ ಕಮಾಂಡ್ 1971ರ ಡಿಸೆಂಬರ್ 16ರಂದು ಢಾಕಾದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುದ್ಧವನ್ನು ಸಮಾಪ್ತಿಗೊಳಿಸಿತು. ಇದು ಭಾರತಕ್ಕೆ ಸಂದ ದೊಡ್ಡ ವಿಜಯವಾಗಿದೆ.