ಹೊಸದಿಗಂತ ವರದಿ,ಹಾವೇರಿ:
ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್ ೨೦೨೩ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಜಿಲ್ಲೆಯ ಶಿಗ್ಗಾವ್ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ಕಾರ್ಮಿಕ ಖಾತೆ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಅವರ ನೂತನ ವಿ.ಐ.ಎನ್.ಪಿ. ಡಿಸ್ಟಿಲರೀಸ್ ಆಂಡ್ ಶುಗರ್ಸ್ನ ೩೦೦೦ ಕೆ.ಎಲ್.ಪಿ.ಡಿ. ಎಥನಾಲ್ ಹಾಗೂ ಸಕ್ಕರೆ ಕಾರ್ಖಾನೆಯ ಉದ್ಘಾಟಿಸಿ ಮಾತನಾಡಿದರು.
ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ದೇಶವಿದೇಶಗಳಿಂದ ಸುಮಾರು ೧೦ ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಇಂಧನ ಉತ್ಪಾದನೆ, ನೀತಿಗಳ ಬಗ್ಗೆ ಚಿಂತನೆ ನಡೆಯುವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೆಚ್ಚು ಆರ್ ಎಂಡ್ ಡಿ ಕೇಂದ್ರಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಇಂಧನ ಸಪ್ತಾಹವನ್ನು ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದರು.