ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿವುಡ್ನ ಸಿನಿಮಾ ‘ಅವತಾರ್: ದಿ ವೇ ಆಫ್ ವಾಟರ್’ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
‘ಅವತಾರ್ 2’ ಕಂಡು ಅನೇಕರು ಫಿದಾ ಆಗಿದ್ದು, ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರ ಕಾರ್ಯವೈಖರಿಗೆ ಭೇಷ್ ಎನ್ನುತ್ತಿದ್ದಾರೆ.
ಒಂದೆಡೆ ಸಿನಿಮಾ ಉತ್ತಮ ವಾಗಿ ಸಕ್ಸಸ್ ಕಾಣುತ್ತಿದ್ದರೆ ಇತ್ತ ಬಾಕ್ಸ್ ಆಫೀಸ್ನಲ್ಲು ಭರ್ಜರಿ ಕಲೆಕ್ಷನ್ ಆಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಕೇವಲ 2 ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಭಾರತದಲ್ಲಿ ‘ಅವತಾರ್ 2’ ಚಿತ್ರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಇಂಗ್ಲಿಷ್ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿಗೂ ಡಬ್ ಆಗಿ ತೆರೆ ಕಂಡಿದೆ. 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಕಟ್ಟಿಕೊಟ್ಟಿರುವ ದೃಶ್ಯಗಳು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಮೊದಲ ದಿನ (ಡಿ.16) ಭಾರತದಲ್ಲಿ ಈ ಸಿನಿಮಾ 40 ಕೋಟಿ ರೂಪಾಯಿ ಗಳಿಸಿತು. ಎರಡನೇ ಕೂಡ ಅಂದಾಜು ಅಷ್ಟೇ ಪ್ರಮಾಣದಲ್ಲಿ ಕಲೆಕ್ಷನ್ ಆಗಿದೆ. ಮೂರನೇ ದಿನವಾದ ಭಾನುವಾರ (ಡಿ.18) ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬಂದು ‘ಅವತಾರ್ 2’ ನೋಡಿದ್ದಾರೆ. ಮೂರು ದಿನಕ್ಕೆ ಅನಾಯಾಸವಾಗಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕಲೆಕ್ಷನ್ ಆಗಿದೆ.
ವಿಶ್ವ ಮಾರುಕಟ್ಟೆಯಲ್ಲಿ ಎರಡೇ ದಿನದಲ್ಲಿ 1500 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. 2009ರಲ್ಲಿ ‘ಅವತಾರ್’ ಚಿತ್ರ ತೆರೆಕಂಡಿತ್ತು. ಅದರ ಮುಂದುವರಿದ ಭಾಗವಾಗಿ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ಈಗ ತೆರೆಕಂಡಿದೆ. 52 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.