ದೇಶದಲ್ಲೀಗ ‘ಅವತಾರ್​ 2’ ಅಬ್ಬರ: 2 ದಿನಕ್ಕೆ 80 ಕೋಟಿ ರೂ. ಕಲೆಕ್ಷನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಾಲಿವುಡ್​ನ ಸಿನಿಮಾ ‘ಅವತಾರ್​: ದಿ ವೇ ಆಫ್​ ವಾಟರ್​’ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
‘ಅವತಾರ್​ 2’ ಕಂಡು ಅನೇಕರು ಫಿದಾ ಆಗಿದ್ದು, ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಅವರ ಕಾರ್ಯವೈಖರಿಗೆ ಭೇಷ್​ ಎನ್ನುತ್ತಿದ್ದಾರೆ.
ಒಂದೆಡೆ ಸಿನಿಮಾ ಉತ್ತಮ ವಾಗಿ ಸಕ್ಸಸ್ ಕಾಣುತ್ತಿದ್ದರೆ ಇತ್ತ ಬಾಕ್ಸ್​ ಆಫೀಸ್​ನಲ್ಲು ಭರ್ಜರಿ ಕಲೆಕ್ಷನ್ ಆಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಓಪನಿಂಗ್​ ಪಡೆದುಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಕೇವಲ 2 ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.
ಭಾರತದಲ್ಲಿ ‘ಅವತಾರ್​ 2’ ಚಿತ್ರ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. ಇಂಗ್ಲಿಷ್​ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿಗೂ ಡಬ್​ ಆಗಿ ತೆರೆ ಕಂಡಿದೆ. 2ಡಿ, 3ಡಿ, ಐಮ್ಯಾಕ್ಸ್​ 3ಡಿ, 4ಡಿಎಕ್ಸ್​ ಮುಂತಾದ ವರ್ಷನ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಿ ಕಟ್ಟಿಕೊಟ್ಟಿರುವ ದೃಶ್ಯಗಳು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಮೊದಲ ದಿನ (ಡಿ.16) ಭಾರತದಲ್ಲಿ ಈ ಸಿನಿಮಾ 40 ಕೋಟಿ ರೂಪಾಯಿ ಗಳಿಸಿತು. ಎರಡನೇ ಕೂಡ ಅಂದಾಜು ಅಷ್ಟೇ ಪ್ರಮಾಣದಲ್ಲಿ ಕಲೆಕ್ಷನ್​ ಆಗಿದೆ. ಮೂರನೇ ದಿನವಾದ ಭಾನುವಾರ (ಡಿ.18) ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬಂದು ‘ಅವತಾರ್​ 2’ ನೋಡಿದ್ದಾರೆ. ಮೂರು ದಿನಕ್ಕೆ ಅನಾಯಾಸವಾಗಿ 100 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಕಲೆಕ್ಷನ್​ ಆಗಿದೆ.
ವಿಶ್ವ ಮಾರುಕಟ್ಟೆಯಲ್ಲಿ ಎರಡೇ ದಿನದಲ್ಲಿ 1500 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂದು ಅಂದಾಜಿಸಲಾಗಿದೆ. 2009ರಲ್ಲಿ ‘ಅವತಾರ್​’ ಚಿತ್ರ ತೆರೆಕಂಡಿತ್ತು. ಅದರ ಮುಂದುವರಿದ ಭಾಗವಾಗಿ ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಈಗ ತೆರೆಕಂಡಿದೆ. 52 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!