ಹೊಸ ದಿಗಂತ ವರದಿ, ಮೈಸೂರು:
ಈ ಬಾರಿ ನಡೆಯಲಿರುವ ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಮನೆ ನೀಡುತ್ತೇವೆ ಎಂದು ಶಾಸಕ ಎಸ್.ಎ.ರಾಮದಾಸ್ ಘೋಷಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನಕಗಿರಿ ಸರ್ಕಾರಿ ಶಾಲೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ” ಪ್ರೇರಣಾ ಪರೀಕ್ಷೆ ” ಹಾಗೂ “ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ಆತ್ಮೀಯ ಸಂವಾದ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದ್ದು, ಭವಿಷ್ಯದ ಬಹುಮುಖ್ಯ ಘಟ್ಟವಾಗಿರುವ ಪರೀಕ್ಷೆಯಲ್ಲಿ ಈ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮಕ್ಕಳಿಗೆ ಮನೆಯನ್ನು ಉಡುಗೊರೆಯಾಗಿ ಘೋಷಿಸಿದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಎಷ್ಟರಮಟ್ಟಿಗೆ ತ್ಯಾಗ ಮಾಡಲಿದ್ದಾರೆಯೋ, ಅಷ್ಟೇ ಪ್ರಮಾಣದ ತ್ಯಾಗಕ್ಕೂ ಸರ್ಕಾರ ಕಂಕಣಬದ್ದವಾಗಿದೆ. ನೀವು ಕಲಿತು ಈ ಸತ್ಪçಜೆಗಳಾದರೆ, ಉನ್ನತ ಸ್ಥಾನಕ್ಕೇರಿದರೆ, ಅದೇ ನೀವು ಈ ಸಮಾಜಕ್ಕೆ, ನಿಮ್ಮ ಪೋಷಕರಿಗೆ ಕೊಡಬಹುದಾದ ದೊಡ್ಡ ಉಡುಗೊರೆಯಾಗಿದೆ. ಆದ್ದರಿಂದ ಉಳಿದಿರುವ ಕೇವಲ 90 ದಿನಗಳಲ್ಲಿ ನಿಮ್ಮೆಲ್ಲರ ಬದಲಾವಣೆಯೇ ನಮ್ಮ ಸಂಕಲ್ಪ. ಅದಕ್ಕಾಗಿಯೇ ಈ ಪ್ರೇರಣ ಪರೀಕ್ಷೆ ಎಂದು ಹೇಳಿದರು.
ಏಪ್ರಿಲ್ ತಿಂಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಎಲ್ಲರೂ ಪ್ರಥಮ ದರ್ಜೆಗಿಂತ ಹೆಚ್ಚಿನ ಅಂಕ ಗಳಿಸಬೇಕು. ಹಾಗೆ ಗಳಿಸುವ ಮಕ್ಕಳ ಮನೆಗೆ ನಾನೇ ಬಂದು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಾತ್ರವಲ್ಲ, ಹತ್ತು ಲಕ್ಷ ಬೆಲೆ ಬಾಳುವ ಮನೆ ಸರ್ಕಾರದ ಯೋಜನೆಯೊಂದರ ಮುಖೇನ ತಮ್ಮ ಪಾಲಿಗೆ ದಕ್ಕಲಿದೆ ಎಂದು ತಿಳಿಸಿದರು.
ಕನಕಗಿರಿಯ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ್ದೇನೆ. ಇಲ್ಲಿನ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗೆ ಸಡ್ಡು ಹೊಡೆಯಬೇಕು. ಆ ಇಚ್ಛಾಶಕ್ತಿ ನಿಮಗೆ ಬರಬೇಕು ಎಂದರು. ಪ್ರಸ್ತುತ 46 ಮಕ್ಕಳು ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ತೇರ್ಗಡೆಯಾಗಲೇಬೇಕು, ಅದು ನಮ್ಮ-ನಿಮ್ಮೆಲ್ಲರ ಸಂಕಲ್ಪವಾಗಬೇಕು ಎಂದು ಹೇಳಿದರು.
ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಸ್ವೀಕರಿಸಿ, ಇಂದಿನಿAದ ಆರಂಭವಾದ ಈ ಪರೀಕ್ಷೆ ಪ್ರತೀ ತಿಂಗಳು ನಡೆಯಲಿದೆ. ಈ ವೇಳೆ ಪ್ರತೀ ಹಂತದಲ್ಲೂ ಎಲ್ಲರ ಮೇಲೆ ನಿಗಾ ಇಡಲಾಗುತ್ತದೆ. ಮೂರು ತಿಂಗಳಲ್ಲಿ 60 ಅಂಕಗಳನ್ನು ಗಳಿಸಲು ನೀವು ಶಕ್ತರಾಗುವುದೇ ಅದಲ್ಲಿ, ಉಳಿಕೆ 40 ಅಂಕಗಳನ್ನು ದಕ್ಕಿಸಿಕೊಳ್ಳುವ ಶಕ್ತಿ ನಿಮಗೆ ಸಿಗಲಿದೆ. ಅದು ಫಲಿತಾಂಶದ ದಿಕ್ಕನ್ನೇ ಬದಲಿಸಲಿದೆ. ಆ ಕಾರಣಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ 5 ಗಂಟೆಗೆ ಎದ್ದು ಓದುವ ಕೆಲಸ ಮಾಡಬೇಕು. ಅದಕ್ಕೆ ಪೂರಕವಾಗಿ ಪೋಷಕರು ನೆರವು ನೀಡಬೇಕು ಎಂದು ಹೇಳಿದರು.
ಫಲಿತಾಂಶ ನನ್ನ ಮುಂದಿರುವ ಏಕೈಕ ಗುರಿ. ಆ ಕಾರಣಕ್ಕಾಗಿ ಪ್ರತಿನಿತ್ಯ ಪ್ರತಿ ಮಕ್ಕಳ ಓದಿನ ಮೇಲೆ ನಮ್ಮ ಕಚೇರಿಯಿಂದ ನಿಗಾ ಇಡಲಾಗುವುದು. ಎಲ್ಲರಿಗೂ ನಿತ್ಯ ಫೋನ್ ಕಾಲ್ ಬರಲಿದೆ. ಆ ವೇಳೆ ಪೂರಕ ಮಾಹಿತಿ ನನಗೆ ತಿಳಿಯಲಿದೆ. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದಿನ 90 ದಿನಗಳ ಕಾಲ ಟಿವಿ ಹಾಗೂ ಮೊಬೈಲ್ ಅನ್ನು ದೂರ ಇಡಿ. ಅವರ ಓದಿಗೆ ಪೂರಕವಾದ ವಾತಾವರಣ ಸೃಷ್ಟಿಸಿಕೊಡಿ ಎಂದು ಸಲಹೆಯನ್ನು ನೀಡಿದರು.
ಕನಕಗಿರಿ ಸರ್ಕಾರಿ ಶಾಲೆಯಲ್ಲಿರುವ 46 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದಲ್ಲಿ ಈ ಸಂದೇಶ ಇಡೀ ರಾಜ್ಯಕ್ಕೆ ಪಸರಿಸಲಿದೆ. ಇದು ಮಾದರಿ ಶಾಲೆ ಆಗಲಿದೆ. ಆದಕಾರಣ ಈ ವಿಚಾರವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ ಎಂದು ¸ ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ 46 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಈ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ತಂದುಕೊಡುವುದಾಗಿ ಪ್ರಮಾಣ ಮಾಡಿದರು.
ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇರ್ಶಕ ರಾಮರಾಜೇಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ, ಬಿಆರ್ ಸಿ ಶ್ರೀಕಂಠಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಸೋಮೆಗೌಡ, ಕಾರ್ಯದರ್ಶಿ ಪವಿತ್ರ, ಮುಖ್ಯ ಶಿಕ್ಷಕಿ ಕೆ.ಆರ್.ಉಷಾ ಹಾಗೂ ಶಿಕ್ಷಣಾ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.
ಪ್ರೇರಣ ಪರೀಕ್ಷೆಯ ಪ್ರಮುಖಾಂಶಗಳು;
* ಅನುತ್ತೀರ್ಣವಾಗಬಹುದಾದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರತಿ ಶಾಲೆಯಲ್ಲಿ ತಯಾರಿಸುವುದು.
* ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ಕೊಡಿಸುವುದು.
* ಬ್ಲಾಕ್ ಹಂತದಲ್ಲಿ ಪರೀಕ್ಷೆ ನಡೆಸಿ, ಪ್ರತೀ ಬ್ಲಾಕ್ ನಲ್ಲಿ ಕನಿಷ್ಠ 60 ಅಂಕ ಗಳಿಸಲು ಶಕ್ತಗೊಳಿಸುವುದು.
* ಈ ಹಂತದಲ್ಲೂ ಪ್ರಗತಿ ಸಾಧಿಸದ ವಿದ್ಯಾರ್ಥಿಗಳಿಗೆ ವಿಶೇಷ ಒತ್ತು ನೀಡುವುದು.
* ಮೂರು ಹಂತದಲ್ಲಿ ಪ್ರೇರಣ ಪರೀಕ್ಷೆ ನಡೆಸಿ, ಕನಿಷ್ಠ 60 ಅಂಕ ಗಳಿಸಲು ಸಿದ್ದಗೊಳಿಸುವುದು.
* ಅಗತ್ಯ ಕಂಡುಬAದಲ್ಲಿ ರಾತ್ರಿ ಶಾಲೆ ಪ್ರಾರಂಭಿಸುವುದು.