ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮಾಜಿ ಪ್ರಧಾನಿ ಭಾರತ ಹಲವು ತುಂಡುಗಳಾಗಬೇಕು ಎಂದು ಉದ್ಧಟತನ ಹೇಳಿಕೆ ನೀಡಿದ್ದ ಬೆನಜೀರ್ ಭುಟ್ಟೋ ಫೋಟೊವನ್ನು ಫ್ಲೆಕ್ಸ್‌ನಲ್ಲಿ ಮುದ್ರಿಸುವ ಮೂಲಕ ಕೇರಳ ಸಿಪಿಎಂ ವಿವಾದ ಸೃಷ್ಟಿಸಿದೆ.
ಕೇರಳ ಸಿಪಿಐ (ಎಂ) ಮಹಿಳಾ ಘಟಕವಾದ ‘ಆಲ್ ಇಂಡಿಯಾ ಡೆಮಾಕ್ರಟಿಕ್ಸ್ ವುಮೆನ್ಸ್ ಅಸೋಸಿಯೇಷನ್’ (AIDWA) ಫ್ಲೆಕ್ಸ್‌ನಲ್ಲಿ ಬೆನಜೀರ್ ಭುಟ್ಟೋ ಫೋಟೊ ಮುದ್ರಿಸಲಾಗಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ತಿರುವನಂತಪುರಂನ ಎಐಡಿಡಬ್ಲ್ಯೂಎ ನ್ಯಾಷನಲ್ ಕಾನ್ಫರೆನ್ಸ್ ಕುರಿತ ಫ್ಲೆಕ್ಸ್‌ನಲ್ಲಿ ಬೆನಜೀರ್ ಭುಟ್ಟೋ ಫೋಟೊ ಮುದ್ರಿಸಲಾಗಿದೆ. ಇದರ ಕುರಿತು ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಆಕ್ರೋಶ ವ್ಯಕ್ತಪಡಿಸಿದ್ದು, ‘ಭಾರತ ಛಿದ್ರ ಛಿದ್ರವಾಗಬೇಕು ಎಂದೆಲ್ಲ ಹೇಳಿಕೆ ನೀಡಿದ್ದ, ಭಾರತ ವಿರೋಧಿ ಮನಸ್ಥಿತಿ ಹೊಂದಿದ್ದ ಬೆನಜೀರ್ ಭುಟ್ಟೋ ಫೋಟೊವನ್ನು ಪಕ್ಷದ ಫ್ಲೆಕ್ಸ್‌ನಲ್ಲಿ ಮುದ್ರಿಸುವ ಮೂಲಕ ಸಿಪಿಎಂ ಕೂಡ ಭಾರತ ವಿರೋಧಿ ಕೃತ್ಯ ಎಸಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಕೇರಳ ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ ಕೂಡ ಸಿಪಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಭಾರತದ ವಿರುದ್ಧ ಸಾವಿರ ವರ್ಷಗಳ ಯುದ್ಧ ಸಾರಿದ ಭುಟ್ಟೋ ಫೋಟೊ ಹಾಕುವ ಮೂಲಕ ಸಿಪಿಎಂ ತನ್ನ ಮನಸ್ಥಿತಿ ಪ್ರದರ್ಶಿಸಿದೆ. ಹಾಗಾಗಿ, ನಾವು ಒಳಗಿನ ಶತ್ರುಗಳ ಕುರಿತು ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಾರೆ.