ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಕ್ಸಿಕೋ ಸಿಟಿಯ ಮೆಟ್ರೋ ಲೈನ್ 3 ನಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 57 ಮಂದಿ ಗಾಯಗೊಂಡಿದ್ದಾರೆ ಎಂದು ಮೆಕ್ಸಿಕೋ ಸಿಟಿಯ ಸರ್ಕಾರದ ಮುಖ್ಯಸ್ಥೆ ಕ್ಲಾಡಿಯಾ ಶೀನ್ಬಾಮ್ ಸ್ಪಷ್ಟಪಡಿಸಿದರು.
ಲಾ ರಝಾ ಮತ್ತು ಪೊಟ್ರೆರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲುಗಳ ನಡುವೆ ಅಪಘಾತ ಸಂಭವಿಸಿದೆ ಎಂದು ಎಲ್ ಯುನಿವರ್ಸಲ್ ವರದಿ ಮಾಡಿದೆ.
ಅಪಘಾತದಲ್ಲಿ ಗಾಯಗೊಂಡಿರುವವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರ ಜೊತೆ ನಾವಿದ್ದೇವೆ ಎಂದು ಶೀನ್ಬಾಮ್ ಧೈರ್ಯ ತುಂಬಿದರು. ಶೇನ್ಬಾಮ್ ಪ್ರಕಾರ, ಗಾಯಗೊಂಡ ಜನರಲ್ಲಿ ಲೋಕೋ ಪೈಲಟ್ಗೆ ಅತ್ಯಂತ ಗಂಭೀರ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಕುರಿತು ಮೆಕ್ಸಿಕೋದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಟ್ವೀಟ್ ಮಾಡಿದ್ದು, “ಮೆಕ್ಸಿಕೋ ಸಿಟಿ ಮೆಟ್ರೋದಲ್ಲಿ ಸಂಭವಿಸಿದ ಅಪಘಾತಕ್ಕೆ ನಾನು ವಿಷಾದಿಸುತ್ತೇನೆ. ದುರದೃಷ್ಟವಶಾತ್ ಒಬ್ಬ ವ್ಯಕ್ತಿ ತನ್ನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದ ಯುವತಿಗೆ ಸಂತಾಪ ಸೂಚಿಸಿರುವ ಅವರು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.