ಶೇ.100 ಫಲಿತಾಂಶ ಪಡೆಯುವ ಶಾಲೆಗಳಿಗೆ ಒಂದು ಲಕ್ಷ ರೂ ಪ್ರೋತ್ಸಾಹ ಧನ: ಶಾಸಕ ಎಸ್.ಎ.ರಾಮದಾಸ್ ಘೋಷಣೆ

ಹೊಸದಿಗಂತ ವರದಿ, ಮೈಸೂರು:

ಪ್ರಸಕ್ತ ಶೈಕ್ಷಣಿಕ ವರ್ಷ ಸೇರಿದಂತೆ ಮುಂದಿನ ಎಲ್ಲಾ ವರ್ಷಗಳಲ್ಲಿ ಶೇ.100 ಫಲಿತಾಂಶ ಪಡೆಯವ ಶಾಲೆಗಳಿಗೆ ಒಂದು ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಶಾಸಕ ಎಸ್.ಎ.ರಾಮದಾಸ್ ಘೋಷಿಸಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ವೃಧ್ದಿಗಾಗಿ ಶುಕ್ರವಾರ ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ವನಿತಾ ಸದನ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದಕ್ಷಿಣ ವಲಯ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಲೆಗಳು ಪ್ರತೀ ವರ್ಷ ಶೇಕಡಾ ನೂರರಷ್ಟು ಫಲಿತಾಂಶ ತಂದಲ್ಲಿ ಪ್ರತೀ ವರ್ಷವೂ ಒಂದು ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.

ಈ ಬಾರಿಯ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ಕುಳಿತಿರುವ ಎಲ್ಲಾ 4291 ವಿದ್ಯಾರ್ಥಿಗಳ ಪೋಷಕರಿಗೆ ಪರೀಕ್ಷಾ ದೃಷ್ಠಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮನವಿ ಪತ್ರವನ್ನು ನೀಡಿದ್ದೇನೆ. ಗುರಿ ಈಡೇರಬೇಕಾದಲ್ಲಿ ಪೋಷಕರಲ್ಲಿ ಬದ್ಧತೆ ಇರಬೇಕಾದುದು ಒಂದೆಡೆಯಾದರೆ, ಶಿಕ್ಷಕರ ಗುರಿ ನಿರ್ಧಿಷ್ಟವಾಗಿರಬೇಕು ಎಂದು ತಿಳಿಸಿದರು.

ಯಾವ ಮಕ್ಕಳು ಓದಿನಲ್ಲಿ ತೀರಾ ಹಿಂದುಳಿದಿದ್ದಾರೆ ಎಂಬ ಅಂಶ ತಿಳಿಯಬೇಕು. ಆ ಮೂಲಕ ಅವರನ್ನು ಗುರುತಿಸಿ ಅವರತ್ತ ಗಮನ ಕೇಂದ್ರೀಕರಿಸಬೇಕಾದ ಹೊಣೆ ಶಿಕ್ಷಕರ ಮೇಲಿದೆ. ನೀವು ಶಿಕ್ಷಕರಲ್ಲ, ಡಾಕ್ಟರ್ ಗಳು. ನಿಮ್ಮೆದುರಿಗಿರುವ ಮಕ್ಕಳ ನಾಡಿಮಿಡಿತ ನಿಮಗೆ ಮಾತ್ರ ತಿಳಿಯಲು ಸಾಧ್ಯ. ಆ ಕಾರಣಕ್ಕಾಗಿಯೇ ಶಿಕ್ಷಕರನ್ನು ದೇವರ ಸ್ಥಾನದಲ್ಲಿ ನಮ್ಮ ಸಮಾಜ ಇಂದು ನೋಡುತ್ತಿದೆ ಎಂದರು.
ಪ್ರೌಢಶಾಲಾ ಹಂತದಲ್ಲಿ ಅನುತ್ತೀರ್ಣಗೊಂಡ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಕುತೂಹಲದಿಂದ ಕೆಲ ಮಕ್ಕಳ ಸಹೋದರ, ಸಹೋದರಿಯನ್ನು ವಿಚಾರಣೆ ಮಾಡಿದಾಗ ಕೆಲ ಆಘಾತಕಾರಿ ವಿಚಾರ ಹೊರಬಂದಿದ್ದುದನ್ನು ಕಂಡು ಸ್ವತಃ ನಾನೇ ಶಾಕ್ ಗೆ ಒಳಗಾಗಿದ್ದೇನೆ. ಶಿಕ್ಷಣ ವಂಚಿತ ಬಹುತೇಕ ಮಕ್ಕಳು ಇಂದು ನಾನಾ ಚಟಗಳಿಗೆ ಬಲಿಯಾಗಿದ್ದಾರೆ. ಗಾಂಜಾ, ಚರಸ್, ಅಫೀಮುಗಳಿಗೆ ದಾಸರಾಗಿದ್ದಾರೆ. ಸಲ್ಯೂಷನ್, ಪೆಟ್ರೋಲ್ ನಶೆಯಲ್ಲಿ ತೇಲುತ್ತಿದ್ದಾರೆ. ಅವರನ್ನು ನೋಡಿದರೆ ಸಂಕಟ ಆಗುತ್ತದೆ ಎಂದು ನೊಂದು ನುಡಿದರು.

ಶಿಕ್ಷಕರಾಗಲೇಬೇಕು ಎಂಬ ಗುರಿಯೊಂದಿಗೆ ಶಿಕ್ಷಕರಾದವರು ಒಂದಷ್ಟು ಮಂದಿಯಾದರೆ, ಅನಿವಾರ್ಯತೆಯಿಂದ ಶಿಕ್ಷಕ ವೃತ್ತಿಗೆ ಬಂದವರು ಮತ್ತಷ್ಟು ಮಂದಿಯಿದ್ದಾರೆ. ಆದರೆ, ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ಭವಿಷ್ಯದ ಭಾರತ ಕಟ್ಟಬೇಕಾದ ಮಕ್ಕಳ ಭವಿಷ್ಯ ನಿಮ್ಮ ಕೈಲಿದೆ ಎಂಬ ಅಂಶ ನಿಮ್ಮಲ್ಲಿರಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ, ವನಿತಾ ಸದನ ಶಿಕ್ಷಣ ಸಂಸ್ಥೆಯ ಅದ್ಯಕ್ಷ ರವಿ, ಬಿ.ಆರ್.ಸಿ ಶ್ರೀಕಂಠಸ್ವಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಂಠ ಶಾಸ್ತಿç, ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು , ಅನುಪಾಲನಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!