ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿತ್ತಲಲ್ಲಿ ಹಾವು ಸಾಕಿಕೊಂಡರೆ ಅವು ಮುಂದೊಂದು ದಿನ ಸಾಕಿದವರನ್ನೇ ಕಡಿಯುತ್ತವೆ ಎಂಬ ಮಾತು ಪಾಕಿಸ್ತಾನದ ವಿಷಯದಲ್ಲಿ ನಿಜವಾದಂತೆ ತೋರುತ್ತಿದೆ. ಇಷ್ಟುದಿನ ಕಾಶ್ಮೀರದ ವಿಚಾರವಾಗಿ ಉಗ್ರವಾದಕ್ಕೆ ಬೆಂಬಲವನ್ನು ನೀಡುತ್ತ, ಕಾಲುಕೆರೆದು ಭಾರತವನ್ನು ಕೆಣಕುತ್ತಿದ್ದ ಪಾಕಿಸ್ತಾನ ಈಗ ಆಂತರಿಕ ಭಯೋತ್ಪಾದನೆಯಿಂದ ತತ್ತರಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ಜನರು ಹೊಟ್ಟೆಗೆ ಹಿಟ್ಟಿಲ್ಲದೇ ಕಂಗಾಲಾಗಿದ್ದರೆ, ಪಾಕಿಸ್ತಾನದ ಸರ್ಕಾರ ತೆಗೆದುಕೊಂಡ ಸಾಲವನ್ನು ತೀರಿಸುವುದು ಹೇಗೆಂದು ತಿಳಿಯದೇ ಪರದಾಡುತ್ತಿದೆ. ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ಗ್ಯಾಸ್ ತುಂಬಿಕೊಂಡು ಸಾಗುವ ದುಸ್ಥಿತಿ ಒದಗಿದೆ. ಇವೆಲ್ಲವುಗಳ ನಡುವೆ ಪಾಕಿಸ್ತಾನದಲ್ಲಿ ಉಗ್ರ ಕೃತ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿದ್ದು ಆಂತರಿಕ ರಕ್ಷಣಾ ವ್ಯವಸ್ಥೆ ಕುಸಿದು ಬಿದ್ದಿದೆ.
ಒಂದು ಕಾಲದಲ್ಲಿ ಪಾಕಿಸ್ತಾನದಿಂದಲೇ ಬೆಂಬಲಿತವಾಗಿದ್ದ ತಾಲೀಬಾನ್ ಉಗ್ರರ ಗುಂಪಿನ ಭಾಗವಾಗಿದ್ದ ಕೆಲ ಇತರ ಭಯೋತ್ಪಾದಕ ಗುಂಪುಗಳು ತೆಹ್ರೀಕ್-ಇ-ತಾಲೀಬಾನ್ ಪಾಕಿಸ್ತಾನ್ (ಟಿಟಿಪಿ) ಎಂಬ ಪ್ರತ್ಯೇಕ ಉಗ್ರ ಸಂಘಟನೆಯನ್ನು ರಚಿಸಿ ಪಾಕಿಸ್ತಾನದ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇತ್ತೀಚಿನ ಕೆಲ ವರದಿಗಳ ಪ್ರಕಾರ, 2022 ರ ಡಿಸೆಂಬರ್ನಲ್ಲಿ ಪಾಕಿಸ್ತಾನವು ಭಯೋತ್ಪಾದನೆಯಲ್ಲಿ ಶೇಕಡಾ 53 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಅಂಕಿ-ಅಂಶಗಳು ಬಹಿರಂಗ ಪಡಿಸಿವೆ. ಹಿಂದಿನ ತಿಂಗಳಿಗೆ ಹೋಲಿಸಿದರೆ 2022 ರ ಡಿಸೆಂಬರ್ನಲ್ಲಿ ಭದ್ರತಾ ಪಡೆಗಳಲ್ಲಿನ ಸಾವುನೋವುಗಳು ಶೇಕಡಾ 55.5 ರಷ್ಟು ಹೆಚ್ಚಾಗಿದೆ, ಸೆಪ್ಟೆಂಬರ್ 2022 ರಲ್ಲಿ ಖೈಬರ್ ಪಖ್ತುನ್ಖ್ವಾ ಪ್ರದೇಶದಲ್ಲಿ ನಾಗರಿಕರ ಸಾವುನೋವುಗಳು ಹೆಚ್ಚಾಗಿದ್ದು ಡಿಸೆಂಬರ್ 2022 ರಲ್ಲಿ 156 ಸಾವುನೋವುಗಳು ದಾಖಲಾಗಿದೆ. ಬಲೂಚಿಸ್ತಾನದ ಬದಲಾಗಿ ಈ ಪ್ರದೇಶವು ಪಾಕಿಸ್ತಾನದ ಅತ್ಯಂತ ಹಿಂಸಾತ್ಮಕ ಪ್ರದೇಶವೆನಿಸಿದೆ. ಕಳೆದ ವರ್ಷದಲ್ಲಿ 21 ಸ್ಥಳೀಯ ಉಗ್ರಗಾಮಿ ಗುಂಪುಗಳು ಮತ್ತು ಅಲ್ ಖೈದಾದ ಪಾಕಿಸ್ತಾನಿ ಅಂಗಸಂಸ್ಥೆಗಳು ತೆಹ್ರೀಕ್-ಇ-ತಾಲೀಬಾನ್ ಪಾಕಿಸ್ತಾನ್ (ಟಿಟಿಪಿ)ಯೊಂದಿಗೆ ವಿಲೀನಗೊಂಡಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಆಂತರಿಕ ಭದ್ರತೆ ಒಂದೆಡೆ ಕುಸಿಯುತ್ತಿದ್ದರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯದ್ದು ಇನ್ನೊಂದು ಕತೆ, ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು USD 4.3 ಶತಕೋಟಿಯಷ್ಟು ಕೆಳಕ್ಕೆ ಇಳಿದಿದೆ. ಅಂದರೆ ಇದು ಕೇವಲ ಮೂರು ವಾರಗಳ ಆಮದುಗಳನ್ನು ಬೆಂಬಲಿಸಬಲ್ಲುದು ಎನ್ನಲಾಗಿದೆ. ವಿದೇಶಿ ನೇರ ಹೂಡಿಕೆಯ ಒಳಹರಿವು ಶೇಕಡಾ 50 ಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸಿದೆ. ಪ್ರಸ್ತುತ ಹಣದುಬ್ಬರ ದರವು ಆಹಾರ ಮತ್ತು ಆಹಾರೇತರ ವಸ್ತುಗಳಿಗೆ ಶೇಕಡಾ 28.7 ರಷ್ಟಿದ್ದು, ಚಳಿಗಾಲದಲ್ಲಿ ಅನಿಲದ ತೀವ್ರ ಕೊರತೆ ಮತ್ತು ಪಾಕಿಸ್ತಾನದ ಪ್ರವಾಹ ಪೀಡಿತ ಜನಸಂಖ್ಯೆಗೆ ಸಹಾಯದ ಕೊರತೆಯಿದೆ. ಒಟ್ಟಿನಲ್ಲಿ ಒಸಾಮಾನಿಗೆ ಆತಿಥ್ಯ ನೀಡಿದ ದೇಶವೀಗ ಸಂಪೂರ್ಣವಾಗಿ ನೆಲಕಚ್ಚಿದ್ದು ಯುಎಇ, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳಿಂದ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದೆ.