ಹೊಸದಿಗಂತ ವರದಿ,ಬಳ್ಳಾರಿ:
ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರು ಶಾಸಕರಾಗಲು ನನ್ನ ಹಾಗೂ ನಮ್ಮ ಕುಟುಂಬದ ಅಳಿಲು ಸೇವೆಯಿದೆ, ಅವರೆಂದೂ ಕೆಟ್ಟಪದವನ್ನು ಬಳಸುವವರಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದರು. ಹೊಸಪೇಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಬಾಲ್ಯದಿಂದ ನೋಡಿರುವೆ, ಅವರ ಬಗ್ಗೆ ಅಪಾರ ಗೌರವವಿದೆ. ಅವರು ಈ ಹಿಂದೆ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನಮ್ಮ ಕುಟುಂಬದ ಅಳಿಲು ಸೇವೆಯಿದೆ. ಅವರು ಎಂದೂ ಇನ್ನೋಬ್ಬರಿಗೆ ಕೆಟ್ಟಪದ ಬಳಸಿಲ್ಲ, ಬಳಸೋದು ಇಲ್ಲ, ಅವರಿಗೆ ಬೇರೆ ಅವರು ಮಾತಾಡಿಸಿರಬಹುದು, ಈ ಆನಂದ್ ಸಿಂಗ್ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡೋದೂ ಇಲ್ಲ, ನಮ್ಮದು ಯಾವಾಗಲೂ ಆರೋಗ್ಯಕರ ರಾಜಕಾರಣ ಮಾಡುವ ಕುಟುಂಬ, ದ್ವೇಷ ಎನ್ನುವ ಪದ ನಮ್ಮ ಕುಟುಂಬದಲ್ಲಿಲ್ಲ, ಈ ಸಿಂಗ್ ಯಾವಾಗಲೂ ಜನರ ಹಿತ ಬಯಸುವವನು, ಯಾರಿಗೂ ಕೆಟ್ಟದ್ದು ಬಯಸುವ ಸಂಪ್ರದಾಯ ನಮ್ಮಲ್ಲಿಲ್ಲ ಎಂದು ತಿಳಿಸಿದರು.
ನಗರದ ಐಎಸ್ ಆರ್ ಸಕ್ಕರೆ ಕಾರ್ಖಾನೆ ಮುಚ್ಚಿಸಲು ಆನಂದ್ ಅವರೇ ಕಾರಣ ಎಂದು ಕೆಲವರು ಅಪಪ್ರಚಾರ ಮಾಡಲು ಮುಂದಾಗಿದ್ದರು, ಈ ಕುರಿತು ಕಾರ್ಖಾನೆ ಮಾಲೀಕರೇ ಸ್ಪಷ್ಟಪಡಿಸಿದ್ದಾರೆ, ಕಾರ್ಖಾನೆ ಮುಚ್ಚಲು ಆನಂದ್ ಸಿಂಗ್ ಅಲ್ಲವೇ ಅಲ್ಲ ಎಂದು ತಿಳಿಸಿದ್ದಾರೆ, ಇವರ ಜೊತೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರು, ರೈತರು ಈ ಕುರಿತು ಸ್ಪಷ್ಟಪಡಿಸಿದ್ದು, ವಿನಾಕಾರಣ ಇದನ್ನು ನಮ್ಮಮೇಲೆ ಎಳೆಯುವ ಪ್ರಯತ್ನ ನಡೆದಿದೆ, ಇದು ಎಂದೂ ಸಾಧ್ಯವಾಗೋಲ್ಲ, ಈ ಕೆಲಸಕ್ಕೆ ಮುಂದಾದವರ ಯತ್ನ ವ್ಯರ್ಥವಾಗಲಿದೆ, ನಾನು ಯಾವತ್ತೂ ಕ್ಲೀನ್ ಆಗಿರುವೆ, ನನಗೆ ಅಭಿವೃದ್ಧಿ ಮುಖ್ಯ, ಕ್ಷೇತ್ರದ ಜನರು ಮುಖ್ಯ, ಅವರ ಸೇವೆಯೇ ಒಂದು ಸೌಭಾಗ್ಯ ಇದ್ದಂತೆ, ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ನಂಬಿಕೆ ಇದೇ ರೀತಿ ಇರಲಿ, ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡುವೆ ಎಂದು ತಿಳಿಸಿದರು.