ಕಾಂಗ್ರೆಸ್‌ನಲ್ಲಿ ಕಮಲ ಕಾಂಗ್ರೆಸ್ಸಿಗರದ್ದೇ ದರ್ಬಾರು: ಪ್ರಜ್ವಲ್ ರೇವಣ್ಣ ವ್ಯಂಗ್ಯ

ಹೊಸದಿಗಂತ ವರದಿ ಸೋಮವಾರಪೇಟೆ: 

ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾಂಗ್ರೆಸ್‌ನಲ್ಲಿ ಕಮಲ ಕಾಂಗ್ರೆಸಿಗರದ್ದೇ ಕಾರುಬಾರು. ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದರೆ ಕೋಮುವಾದಿ ಬಿಜೆಪಿಗೆ ಮತ ನೀಡಿದಂತೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಹೇಳಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಕೋಮುವಾದಿಗಳು ಬುರ್ಖಾ ಧರಿಸಿದ ಮುಸ್ಲಿಂ ಹೆಣ್ಣು ಮಕ್ಕಳನ್ನು ಅಟ್ಟಿಸಿಕೊಂಡು ಹೋದ ಸಂದರ್ಭದಲ್ಲೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಬಾಯಿಗೆ ಬೀಗ ಹಾಕಿಕೊಂಡಿದ್ದರು. ಯಾರೂ ಮಾತನಾಡದಂತೆ, ಹೇಳಿಕೆ ಕೊಡದಂತೆ ಕಟ್ಟಪ್ಪಣೆ ಕೊಟ್ಟಿದರು. ಆದರೆ ಎಚ್.ಡಿ.ಕುಮಾರಸ್ವಾಮಿ ಮಾತ್ರ ಮುಸ್ಲಿಂ ಮಹಿಳೆಯರ ಪರವಾಗಿ ಹೇಳಿಕೆ ನೀಡಿ ಅವರಿಗೆ ಮಾನಸಿಕ ಧೈರ್ಯ ತುಂಬಿದರು.

ರಾಜ್ಯದಲ್ಲಿ ಜಾತ್ಯತೀತ ಜನತಾದಳ ಅಧಿಕಾರಕ್ಕೆ ಬಂದು, ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿಯವರು ಮಾತು ಕೊಟ್ಟಿದ್ದಾರೆ. ಮಾತಿನಂತೆ ನಡೆಯುವುದು ಜೆಡಿಎಸ್ ಹೆಗ್ಗಳಿಕೆ ಎಂದು ಪ್ರಜ್ವಲ್ ನುಡಿದರು. ದೇವೆಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾರೆ. ಸಮ್ಮಿಶ್ರ ಸರ್ಕಾರವಿದ್ದಾಗಲೂ ರೈತರ ಸಾಲ ಮನ್ನಾ ಮಾಡಿದ್ದಾರೆ. ಬಡವರು, ದೀನ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾಯತರಿಗೆ ಅನೇಕ ಯೋಜನೆಗಳ ಸೌಲಭ್ಯಗಳನ್ನು ನೀಡಿದ್ದಾರೆ ಎಂದರು.

ಕೇಂದ್ರದಿಂದ ಅನ್ಯಾಯ: ಕಾಫಿ ಉದ್ಯಮದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 12ಸಾವಿರ ಕೋಟಿ ರೂ. ಹಣ ವಿದೇಶಿ ವಿನಿಮಯ ಮತ್ತು ತೆರಿಗೆಯಿಂದ ಬರುತ್ತಿದೆ. ಕೇವಲ 500ಕೋಟಿ ರೂ.ಗಳನ್ನು ಕಾಫಿ ಮಂಡಳಿಯ ಮೂಲಕ ಕಾಫಿ ಉದ್ಯಮಕ್ಕೆ ನೀಡಿ ಎಂದು ಕೇಂದ್ರ ವಾಣಿಜ್ಯ ಮಂತ್ರಿಗಳಿಗೆ ಮನವಿ ಪತ್ರದ ಮೂಲಕ ಬೇಡಿಕೆಯಿಟ್ಟಿದ್ದೆ. ಆದರೆ ನನ್ನ ಮನವಿ ಪತ್ರವನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ಕಾಫಿ ಬೆಳೆಗಾರರಿಗೆ ಕೇಂದ್ರ ಅನ್ಯಾಯ ಮಾಡಿದೆ ಎಂದು ದೂರಿದರು.

ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರು ಸ್ವಾಭಿಮಾನಿಗಳು, ಕೈಯಿಂದ ಕೊಟ್ಟವರೇ ಹೊರತು ಬೇಡಿದವರಲ್ಲ. ಕಾಫಿ ಉದ್ಯಮ ನಶಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯವೂ ಸತ್ತು ಹೋಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ 15 ದಿನದಲ್ಲೇ ನೂರಾರು ಜೆಸಿಬಿ ಕಳುಹಿಸಿ ರಸ್ತೆ ಸರಿಪಡಿಸಿ, ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಲ್ಲಬೇಕು.

ಜೆಡಿಎಸ್ ಬಲಿಷ್ಠ: ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದ ಅವರು, ಬಿಜೆಪಿಯವರು ಜೆಡಿಎಸ್ ಬಗ್ಗೆ ಕುಟುಂಬ ರಾಜಕಾರಣ ಎನ್ನುತ್ತಾರೆ. ಕಳೆದ ಬಾರಿಯ ಎಂ.ಎಲ್.ಸಿ. ಪ್ರಸಕ್ತ ವರ್ಷದ ಎಂ.ಎಲ್.ಸಿ ಟಿಕೆಟ್ ಒಂದೇ ಕುಟುಂಬದವರಿಗೆ ಕೊಟ್ಟಿಲ್ಲವೆ? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!