ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಮತ್ತೆ ಎಡವಟ್ಟು ಮಾಡಿಕೊಂಡಿದೆ. ತನ್ನ ರ‍್ಯಾಂಕ್ ಪಟ್ಟಿ ಯಲ್ಲಿ ಇಂದು ಭಾರತವನ್ನು ಮೊದಲ ಸ್ಥಾನಕ್ಕೆ ಏರಿಸಿದ ಸಮಿತಿ ಇದೀಗ ಎರಡನೇ ಸ್ಥಾನಕ್ಕೆ ಇಳಿಸಿದೆ.
ಹೌದು, ಬುಧವಾರ ಮಧ್ಯಾಹ್ನ (ಫೆಬ್ರವರಿ 15ರಂದು) ಐಸಿಸಿ ತನ್ನ ಟೆಸ್ಟ್ ರ‍್ಯಾಂಕ್ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಭಾರತ ತಂಡಕ್ಕೆ 116 ರೇಟಿಂಗ್ ಅಂಕಗಳನ್ನು ನೀಡಿ ಮೊದಲ ಸ್ಥಾನಕ್ಕೆ ಏರಿಸಿತ್ತು. ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡಕ್ಕೆ 11 ರೇಟಿಂಗ್ಸ್ ಅಂಕಗಳನ್ನು ಕೊಟ್ಟು ಎರಡನೇ ಸ್ಥಾನಕ್ಕೆ ಇಳಿಸಿತ್ತು. ಆದ್ರೆ ವಾಸ್ತವದಲ್ಲಿ ಅದು ತಪ್ಪು ಲೆಕ್ಕಾಚಾರ. ಆಸೀಸ್ ಭಾರತಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, (126) ಈ ಮಾಹಿತಿ ಅಪ್ಡೇಟ್ ಮಾಡುವ ವೇಳೆ ಐಸಿಸಿ ಎಡವಟ್ಟು ಮಾಡಿಕೊಂಡಿದೆ. ತಕ್ಷಣವೇ ತಪ್ಪು ಸರಿಪಡಿಸಿಕೊಂಡಿದೆ.
ಆದ್ರೆ ಇತ್ತ ಭಾರತ ತಂಡದ ಮೊದಲ ಸ್ಥಾನಕ್ಕೆ ಏರಿದೆ ಎಂದು ತಿಳಿದುಕೊಂಡ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದರು. ಭಾರತ ತಂಡ ಈಗಾಗಲೇ ಟಿ20 ಹಾಗೂ ಏಕ ದಿನ ಮಾದರಿಯಲ್ಲಿ ಮೊದಲ ಸ್ಥಾನದಲ್ಲಿರುವ ಕಾರಣ ಮೂರು ಮಾದರಿಯಲ್ಲಿ ಭಾರತದ್ದೇ ಪಾರುಪತ್ಯ ಎಂದು ಹೇಳಿಕೊಂಡಿದ್ದರು. ಆದರೆ, ಸಂಭ್ರಮ ಕೊನೆಗೊಂಡಿದೆ.