ಹೊಸದಿಗಂತ ವರದಿ ಸೋಮವಾರಪೇಟೆ:
ಇಲ್ಲಿಗೆ ಸಮೀಪದ ಬಿಳಿಗೇರಿಯಲ್ಲಿ ದಲಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ಎರಡು ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿಳಿಗೇರಿಯಲ್ಲಿ 19 ವರ್ಷ ವಯಸ್ಸಿನ ದಲಿತ ವಿವಾಹಿತ ಯುವತಿಯ ಮೇಲೆ ಮಂಗಳವಾರ ತಡರಾತ್ರಿ 9:30ರ ವೇಳೆಗೆ ಅತ್ಯಾಚಾರ ಯತ್ನ ನಡೆದಿದೆ. ಆರೋಪಿಗಳು ಯುವತಿಯ ಮಾನಭಂಗ ಮಾಡಿ ಅತ್ಯಾಚಾರ ನಡೆಸಲು ಬಲತ್ಕಾರವಾಗಿ ಕಾಫಿ ತೋಟದೊಳಕ್ಕೆ ಎಳೆದೊಯ್ಯುತ್ತಿದ್ದಾಗ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿದ ಯುವತಿಯ ಸಂಬಂಧಿಕರು ಭಯಭೀತರಾಗಿ ಕೂಡಲೇ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಪ್ರಮುಖರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿಯಾದ ನಂದಿಮೊಟ್ಟೆಯ ರಾಜ ಹಾಗೂ ದುಷ್ಕೃತ್ಯಕ್ಕೆ ಬಳಸಿದ ಎರಡು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ದುಷ್ಕೃತ್ಯದ ನಡೆಸಿದ ಪ್ರಮುಖ ಆರೋಪಿಗಳಾದ ಹಟ್ಟಿಹೊಳೆಯ ನೌಶದ್ ಹಾಗೂ ಇಗ್ಗೋಡ್ಲು ಆಶ್ರಯ ಕಾಲೋನಿಯ ನಿವಾಸಿ ಹಾಗೂ ಮಾದಾಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಫಾರೂಕ್ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ.
ದುಷ್ಕೃತ್ಯಕ್ಕೆ ಬಳಸಿರುವ ಎರಡು ಆಟೋ ರಿಕ್ಷಾಗಳು ಇಗ್ಗೋಡ್ಲು ಆಶ್ರಯ ಕಾಲೋನಿಯ ನೌಶದ್ ಹಾಗೂ ರಶೀದ್ ಎಂಬವರಿಗೆ ಸೇರಿದ್ದೆನ್ನಲಾಗಿದ್ದು, ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಓರ್ವ ಆರೋಪಿ ಹಾಗೂ ಎರಡು ಆಟೋ ರಿಕ್ಷಾಗಳನ್ನು ಸೋಮವಾರಪೇಟೆ ಪೋಲೀಸರಿಗೊಪ್ಪಿಸಿದ್ದಾರೆ.
ಆರೋಪಿಗಳು ಹೊರದೇಶಗಳಿಗೆ ಪಲಾಯನವಾಗುವ ಸಾಧ್ಯತೆಯಿರುವುದರಿಂದ ದುಷ್ಕೃತ್ಯ ನಡೆಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ. ತಪ್ಪಿದ್ದಲ್ಲಿ ಅನ್ಯಾಯಕ್ಕೊಳಗಾದ ಯುವತಿ ಹಾಗೂ ಅವರ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಲು ಸಂಘಟನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ.
ಈ ಸಂದರ್ಭ ಹಿಂ.ಜಾ.ವೇ. ಜಿಲ್ಲಾ ಸಮಿತಿ ಪ್ರಮುಖರಾದ ಎಂ.ಬಿ. ಉಮೇಶ್, ಮನೋಹರ್, ಸುನಿಲ್ ಮಾದಾಪುರ, ಹಿಂ.ಜಾ.ವೇ.ತಾಲೂಕು ಸಹ ಸಂಚಾಲಕ್ ವಿನು ಮಾದಾಪುರ, ಸೂರಜ್, ಚೇತನ್, ಪ್ರಥನ್, ಶರಣು, ಅಭಿಲಾಷ್, ನಿತೀಶ್ ಸೇರಿದಂತೆ ಪ್ರಮುಖ ಕಾರ್ಯಕರ್ತರು, ಸ್ಥಳೀಯರು ನೊಂದ ಯುವತಿಯ ಪರವಾಗಿ ತಡರಾತ್ರಿವರೆಗೂ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು.
ಸೋಮವಾರಪೇಟೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದು ಆರೋಪಿಗಳ ಬಂಧನಕ್ಕೆ ಶೋಧ ಮುಂದುವರೆಸಿದ್ದಾರೆ.