ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್(IPL 2023) ಆರಂಭಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಇದರ ಜೊತೆಗೆ ಇತ್ತ ಕೊರೋನಾ ಆತಂಕ ಶುರುವಾಗಿದೆ.
ಈ ಹಿನ್ನೆಲೆ ಐಪಿಎಲ್ನ ಎಲ್ಲ ಫ್ರಾಂಚೈಸಿಗಳು ಕೊರೋನಾ (COVID-19) ಮಾರ್ಗಸೂಚಿಗೆ ಬದ್ಧವಾಗಿರಬೇಕು ಎಂದು ಬಿಸಿಸಿಐ(BCCI) ಸ್ಪಷ್ಟ ಸಂದೇಶ ನೀಡಿದೆ.
ಈಗಾಗಲೇ ಐಪಿಎಲ್ ಆಡಳಿತ ಮಂಡಳಿ ಕೋವಿಡ್ ಮಾರ್ಗಸೂಚಿಯನ್ನು(COVID-19 guidelines) ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಬುಧವಾರ ಆದೇಶ ಹೊರಡಿಸಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್-19(COVID-19) ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ, ವಿಭಿನ್ನ ತಳಿಯ ರೂಪಾಂತರ ವೈರಸ್ಗಳ ಕೇಸ್ ಭಾರತದ ಕೆಲ ನಗರಗಳಲ್ಲಿ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಕೆಲವು ರಾಜ್ಯಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಈ ನಿಯವನ್ನು ಐಪಿಎಲ್ನಲ್ಲಿ ಪಾಲ್ಗೊಳ್ಳುವ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗಳು ಪಾಲಿಸಬೇಕು ಎಂದು ಬಿಸಿಸಿಐ ತಿಳಿಸಿದೆ. ಒಂದೊಮ್ಮೆ ಈ ನಿಯವನ್ನು ಪಾಲಿಸದೇ ಇದ್ದಲ್ಲಿ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಂಘಟಕರಿಗೆ ಬಿಸಿಸಿಐ ಆದೇಶದಲ್ಲಿ ತಿಳಿಸಿದೆ.
ಮಾರ್ಗಸೂಚಿಯ ಪ್ರಕಾರ ಐಪಿಎಲ್ ಆಡುವ ವೇಳೆ ಯಾವುದೇ ಆಟಗಾರನಿಗೆ ಅಥವಾ ಸಿಬ್ಬಂದಿಗೆ ಪಾಸಿಟಿವ್ ಬಂದರೆ ಕೂಡಲೇ ಅವರು ತಂಡವನ್ನು ತೊರೆಯಬೇಕು. ಜತೆಗೆ ಒಂದು ವಾರಗಳ ಕಾಲ ಕ್ವಾರಂಟೈನ್ವಾಸದಲ್ಲಿರಬೇಕು.
ಪಾಸಿಟಿವ್ ಆದ ಆಟಗಾರನ ಟೆಸ್ಟ್ ರಿಪೋರ್ಟ್ ಐದನೇ ದಿನ ನೆಗೆಟಿವ್ ಬಂದರೆ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 24 ಗಂಟೆಯೊಳಗೆ ನಡೆಯಲಿರುವ ಎರಡನೇ ಟೆಸ್ಟ್ನ ವರದಿಯು ನೆಗೆಟಿವ್ ಬಂದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ಈ ಬಾರಿ ಬಯೋ ಬಬಲ್ ಇಲ್ಲದಿದ್ದರೂ ಆಟಗಾರರು ಅಭಿಮಾನಿಗಳೊಂದಿಗೆ ಸಂವಹನವನ್ನು ಮಿತಿಗೊಳಿಸಬೇಕು ಎಂದು ಆಟಗಾರರಿಗೆ ಬಿಸಿಸಿಐ ಸಲಹೆ ನೀಡಿದೆ. ಎಲ್ಲ ಆಟಗಾರರ ಮೇಲು ತಂಡಗಳ ವೈದ್ಯರು ಹೆಚ್ಚಿನ ನಿಗಾ ಇರಿಸಬೇಕು. ಒಂದೊಮ್ಮೆ ಆಟಗಾರರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದರೂ ಅವರನ್ನು ತಕ್ಷಣ ಪ್ರತ್ಯೇಕ ವಾಸದಲ್ಲಿರುವಂತೆ ಮಾಡಬೇಕು ಎಂದು ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೆ ಸೂಚನೆ ನೀಡಿದೆ.