ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸಿನಿಮಾ ನಟರಾದ ಶ್ರೀನಾಥ್ ಬಾಸಿ (Sreenath Bhasi) ಹಾಗೂ ಶೇನ್ ನಿಗಮ್ (Shane Nigam) ಇಬ್ಬರನ್ನೂ ಅಶಿಸ್ತಿನ ಕಾರಣ ನೀಡಿ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿ ಕರೆದಿದ್ದ ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಹಾಗೂ ಕೇರಳ ಸಿನಿಮಾ ನಿರ್ಮಾಪಕರ ಸಂಘ ಜಂಟಿಗೋಷ್ಠಿ ನಡೆಸಿ ಈ ಇಬ್ಬರೂ ನಟರನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕುಂಬಳಂಗಿ ನೈಟ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಇಬ್ಬರೂ ನಟಿಸಿದ್ದಾರೆ. ಹೋಮ್ ನಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಆದರೂ, ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣ ಸೆಟ್ ನಲ್ಲಿ ಸಾಕಷ್ಟು ಅಶಿಸ್ತು ತೋರಿಸುತ್ತಿದ್ದರಂತೆ. ಶೂಟಿಂಗ್ ಸೆಟ್ ನಲ್ಲೇ ಮಾದಕ ವ್ಯಸನದ ಗುಂಗಿನಲ್ಲಿ ಇರುತ್ತಿದ್ದರು ಎಂದು ಆರೋಪಿಸಲಾಗಿದೆ.
ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಹೀಗೆ ಸಿನಿಮಾಗಳಿಗೆ ತೊಂದರೆ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ. ರಂಜಿತ್, ಕೆಲವು ವಾರಗಳ ಹಿಂದೆಯಷ್ಟೇ ಆರ್.ಡಿ.ಎಕ್ಸ್ ಹೆಸರಿನ ಸಿನಿಮಾದಿಂದಲೂ ಈ ನಟರು ಹೊರ ಬಂದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ಯಾರೂ ಇವರಿಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.