ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮೇ 28ರಂದು ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದು, ಇದೇ ವೇಳೆ ಐತಿಹಾಸಿಕ ರಾಜದಂಡ ‘ಸೆಂಗೋಲ್’ ಅನ್ನು ಹೊಸ ಸಂಸತ್ ಭವನದ ಸ್ಪೀಕರ್ ಕುರ್ಚಿ ಬಳಿ ಇರಿಸಲಿದ್ದಾರೆ. ದೇಶದಲ್ಲಿ ರಾಜಪ್ರಭುತ್ವ ಕಾಲದಿಂದಲೂ ಅಧಿಕಾರ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರವನ್ನು ಸೆಂಗೋಲ್ ಮೂಲಕ ಮಾಡಲಾಗುತ್ತಿತ್ತು.
ಚೋಳರ ಕಾಲದ ಈ ರಾಜದಂಡ ಭಾರತ ಸ್ವಾತಂತ್ರ್ಯದ ಸಂಕೇತವಾಗಿ ಅಂದಿನ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ನೀಡಲಾಗಿತ್ತು.
ಬ್ರಿಟಿಷ ಸರ್ಕಾರದ ಕೊನೆಯ ಗವರ್ನರ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ಸೆಂಗೋಲ್ ಅನ್ನು ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಅಧಿಕಾರ ಹಸ್ತಾಂತರ ಸಂಕೇತವಾಗಿ ನೀಡಿದ್ದರು.
ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸ್ಮರಣಿಕೆ ಈವರೆಗೆ ಅಲಹಾಬಾದ್ನ ಆನಂದ ಭವನದ ಮ್ಯೂಸಿಯಂನಲ್ಲಿ ಬಂಧಿಯಾಗಿತ್ತು. ಗಾಜಿನ ಶೋಕೇಸ್ನಲ್ಲಿಟ್ಟು, ಅದರ ಕೆಳಗೆ ಹೀಗೆ ಬರೆಯಲಾಗಿತ್ತು ‘ಗೋಲ್ಡನ್ ಸ್ಟಿಕ್ ಗಿಫ್ಟೆಡ್ ಟು ಪಂಡಿತ ಜವಹರಲಾಲ್ ನೆಹರು’. ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಉಡುಗೊರೆಯಾಗಿ ನೀಡಲಾದ ಚಿನ್ನದ ಊರುಗೋಲು ಎಂದರ್ಥ.
ಇದೀಗ ಅದೇ ರಾಜದಂಡ ಅಥವಾ ನ್ಯಾಯದಂಡವನ್ನು ತಮಿಳುನಾಡಿನ ಮಧುರೈ ಅಧೀನಂ ಮಠದ 293ನೇ ಪ್ರಧಾನ ಪೀಠಾಧಿಪತಿ ಹರಿಹರ ದೇಶಿಕ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರ ಮಾಡಲಿದ್ದಾರೆ.
ಹರಿಹರ ದೇಶಿಕ ಸ್ವಾಮೀಜಿ ಅವರು ಹೊಸ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸೆಂಗೋಲ್ ಅನ್ನು ಪ್ರದಾನ ಮಾಡುವುದಾಗಿ ಗುರುವಾರ ಹೇಳಿದ್ದಾರೆ.