ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೇ 28 ರಂದು ನವದೆಹಲಿಯಲ್ಲಿ ನಡೆಯಲಿರುವ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಗುರುವಾರ ಹೇಳಿದ್ದಾರೆ.
‘ನಾನು ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಭಾಗವಹಿಸುತ್ತಿದ್ದೇನೆ. ಇದು ದೇಶದ ಆಸ್ತಿ. ಇದು ಯಾರೊಬ್ಬರ ವೈಯಕ್ತಿಕ ವಿಷಯವಲ್ಲ’ ಎಂದು ದೇವೇಗೌಡರು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಇದು ಯಾರೊಬ್ಬರ ವೈಯಕ್ತಿಕ ಕಾರ್ಯಕ್ರಮವಲ್ಲ, ಇದು ದೇಶದ ಕಾರ್ಯಕ್ರಮ. ‘ಆ ಭವ್ಯವಾದ ಕಟ್ಟಡವನ್ನ ದೇಶದ ಜನರ ತೆರಿಗೆ ಹಣದಿಂದ ನಿರ್ಮಿಸಲಾಗಿದೆ. ಅದು ದೇಶಕ್ಕೆ ಸೇರಿದೆ ಎಂದರು. ಇನ್ನು ಮಾಜಿ ಪ್ರಧಾನಿಯಾಗಿ ಮತ್ತು ದೇಶದ ಪ್ರಜೆಯಾಗಿ ಹೊಸ ಸಂಸತ್ ಕಟ್ಟಡದ ಉದ್ಘಾಟನೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.