ಏನಾದರೊಂದು ತಿನ್ನುತ್ತಲೇ ಇರಬೇಕೆಂಬ ಬಯಕೆ ಅನೇಕರಿಗೆ ಇರುತ್ತದೆ. ಈ ರೀತಿಯ ಹವ್ಯಾಸ ದೇಹಾರೋಗ್ಯವನ್ನು ಹಾಳು ಮಾಡುತ್ತದೆ. ಒಮ್ಮೆ ಆಹಾರ ಸೇವಿಸಿದರೆ ಕನಿಷ್ಟ ಐದು ತಾಸುಗಳ ಕಾಲ ಹಸಿವಾಗುವುದಿಲ್ಲ. ಆದರೆ ಕೆಲವರಿಗೆ ಆಹಾರ ಸೇವಿಸಿದ ಎರಡೇ ಗಂಟೆಗಳಲ್ಲಿ ಮತ್ತೆ ಆಹಾರ ಸೇವಿಸುವ ಚಟ ಇಟ್ಟುಕೊಳ್ಳುತ್ತಾರೆ.
ಇದರಿಂದಾಗಿ ಅನೇಕ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಸಿವೆ ತಡೆಯಲು ಸಿಕ್ಕು ಸಿಕ್ಕಿದ್ದನ್ನೆಲ್ಲ ತಿನ್ನುವುದನ್ನು ಕಾಣುತ್ತೇವೆ. ಎಣ್ಣೆ ತಿಂಡಿ, ಕುರುಕಲು ತಿಂಡಿ, ಜೊತೆಗೆ ಸೋಡಾ, ಪೆಪ್ಸಿ ಈ ರೀತಿಯ ತಿನ್ನುವ ಚಟ ವ್ಯಕ್ತಿಯನ್ನು ಅನಾರೋಗ್ಯಪೀಡಿತರನ್ನಾಗಿಸುತ್ತದೆ ಎಂಬುದು ಸಂಶೋಧನೆಗಳು ದೃಢಪಡಿಸಿವೆ. ದೇಹದಲ್ಲಿ ಕೊಬ್ಬಿನ ಅಂಶ ಅಧಿಕವಾಗಿ ದೇಹದ ತೂಕವೂ ಹೆಚ್ಚಲು ಪ್ರಮುಖ ಕಾರಣವಾಗುತ್ತವೆ.
ಆಹಾರ ಸೇವನೆಯ ಸಂದರ್ಭದಲ್ಲೂ ಗಮನ ಹರಿಸುವುದು ಮುಖ್ಯ. ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರಗಳಿಗೆ ಮೊರೆಹೋಗಬೇಕು. ಇದರಿಂದ ದೇಹದಲ್ಲಿ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ದೇಹದ ಶಕ್ತಿ ಹೆಚ್ಚುವುದರೊಂದಿಗೆ ರೋಗನಿರೋಧಕ ಶಕ್ತಿಯೂ ವೃದ್ದಿಸುತ್ತದೆ.
ಶುದ್ಧವಾದ ನೀರನ್ನು ಕುಡಿಯುವ ಹವ್ಯಾಸವನ್ನು ರೂಢಿಸುವುದರಿಂದ ಹಸಿವು ನಿವಾರಣೆ ಸಾಧ್ಯವಾಗುತ್ತದೆ. ನೀರಿನ ಸೇವನೆ ದೇಹಾರೋಗ್ಯವನ್ನು ವೃದ್ದಿಮಾಡುತ್ತದೆ.
ದ್ರವ ಪದಾರ್ಥಗಳಾದ ಜ್ಯೂಸ್, ಹಣ್ಣಿನ ತಾಜಾ ರಸಗಳ ಸೇವನೆಯೂ ಉತ್ತಮ. ಆಹಾರ ಸೇವನೆ ಸಂದರ್ಭದಲ್ಲಿ ತರಕಾರಿ, ಹಣ್ಣುಗಳ ಆಯ್ಕೆ ಉತ್ತಮವಾಗಿರಬೇಕು. ಫೈಬರ್ ಯುಕ್ತ ಆಹಾರಕ್ಕೆ ಆದ್ಯತೆ ನೀಡುವುದು ಒಳಿತು. ಮೊಳಕೆ ಕಾಳುಗಳು, ಅಗಸೆ ಬೀಜ, ಸಿಹಿಗೆಣಸುಗಳನ್ನು ಆಹಾರದಲ್ಲಿ ಇರುವಂತೆ ಗಮನ ಹರಿಸಿಕೊಳ್ಳಿ.