ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ಪ್ರವಾಹಕ್ಕೆ ಹರಿಯಾಣ ಸರ್ಕಾರವೇ ಹೊಣೆ ಎಂದು ಎಎಪಿ ನಾಯಕರು ಆರೋಪಿಸಿದ್ದಾರೆ. ದೆಹಲಿ ಸರ್ಕಾರವನ್ನು ದುರ್ಬಲಗೊಳಿಸಲು ಹರಿಯಾಣದ ಬಿಜೆಪಿ ಸರ್ಕಾರವು ಹತ್ನಿಕುಂಡ್ ಬ್ಯಾರೇಜ್‌ನಿಂದ ನೀರು ಬಿಡುತ್ತಿದೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ದಿನಗಳಿಂದ ಮಳೆ ಇಲ್ಲ. ಆದರೆ, ಯಮುನಾ ನದಿ ನೀರಿನ ಮಟ್ಟ ಕಡಿಮೆಯಾಗುವ ಬದಲು ಹೆಚ್ಚುತ್ತಿದೆ. ಹರ್ಯಾಣ ಸರ್ಕಾರ ಉದ್ದೇಶಪೂರ್ವಕವಾಗಿ ನೀರು ಹರಿಸುತ್ತಿರುವುದೇ ಇದಕ್ಕೆ ಕಾರಣ ಎಂದರು. ಎಎಪಿ ವಕ್ತಾರ ಪ್ರಿಯಾಂಕಾ ಕಕ್ಕರ್ ಕೂಡ ಇದೇ ಆರೋಪ ಮಾಡಿದ್ದಾರೆ.
ಸಂಸದ ಸಂಜಯ್ ಸಿಂಗ್ ಮಾತನಾಡಿ, ಹತ್ನಿಕುಂಡ್ ಬ್ಯಾರೇಜ್‌ನ ಮೂರು ಕಾಲುವೆಗಳಿದ್ದು, ಒಂದು ಕಾಲುವೆಗೆ ನೀರು ಬಿಟ್ಟರೆ ಉತ್ತರ ಪ್ರದೇಶಕ್ಕೆ, ಇನ್ನೊಂದರಿಂದ ದೆಹಲಿಗೆ, ಮೂರನೇ ಕಾಲುವೆಯಿಂದ ಹರಿಯಾಣಕ್ಕೆ ನೀರು ಹೋಗುತ್ತದೆ. ಪ್ರವಾಹದ ಸಂದರ್ಭದಲ್ಲಿ ಹತ್ನಿಕುಂಡ್‌ನಿಂದ ಯುಪಿ, ಹರಿಯಾಣ ಮತ್ತು ದೆಹಲಿಗೆ ಸಮಾನ ಪ್ರಮಾಣದಲ್ಲಿ ನೀರು ಬಿಡಬೇಕಾಗುತ್ತದೆ. ಆದರೆ, ಹರಿಯಾಣದ ಸರ್ಕಾರ ದೆಹಲಿ ಸರ್ಕಾರವನ್ನು ಹತ್ತಿಕ್ಕುವ ಉದ್ದೇಶದಿಂದ ಎರಡು ಕಾಲುವೆಗಳನ್ನು ಮುಚ್ಚಿ ಯಮುನಾ ನದಿಗೆ ನೀರು ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಮೂರು ಕಾಲುವೆಗಳನ್ನು ತೆರೆದು ನೀರು ಬಿಟ್ಟಿದ್ದರೆ ದೆಹಲಿಯಲ್ಲಿ ಈ ಪ್ರಮಾಣದಲ್ಲಿ ಪ್ರವಾಹ ಉಂಟಾಗುತ್ತಿರಲಿಲ್ಲ ಎಂದರು.
ಏತನ್ಮಧ್ಯೆ, ಎಎಪಿ ನಾಯಕರ ಆರೋಪಗಳನ್ನು ಹರಿಯಾಣ ಸರ್ಕಾರ ನಿರಾಕರಿಸಿದೆ. ಸರ್ಕಾರದ ಪರವಾಗಿ ವಾರ್ತಾ ಇಲಾಖೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದೆ. ಎಎಪಿ ಸರ್ಕಾರದ ಆರೋಪಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಪ್ರವಾಹ ತಡೆಯಲು ತಮ್ಮ ಅಸಮರ್ಥತೆ ಮತ್ತು ಸರ್ಕಾರದ ನಿರ್ಲಕ್ಷ್ಯವನ್ನು ಮುಚ್ಚಿಕೊಳ್ಳಲು ಎಎಪಿ ನಾಯಕರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ಹರಿಯಾಣ ಸರ್ಕಾರ ಟೀಕಿಸಿದೆ.