ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಲವು ಕಡೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.
ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಮನೆ ಸಂಪೂರ್ಣ ಹಾನಿಯಾಗಿತ್ತು. ಇದೀಗ ಮನೆ ಏಕಾಏಕಿ ಕುಸಿದು ಬಿದ್ದಿದ್ದು, ದುರಂತದಲ್ಲಿ ಒಂದು ವರ್ಷದ ಮಗು ಸ್ಫೂರ್ತಿ ಸಾವನ್ನಪ್ಪಿದ್ದಾಳೆ.
ಗ್ರಾಮದ ಕೆಂಚಪ್ಪ ಹಾಗೂ ಲಕ್ಷ್ಮಿದೇವಿ ಅವರ ಪುತ್ರಿ ಸ್ಪೂರ್ತಿ ಮೃತಪಟ್ಟ ಮಗು. ತಂದೆ ಕೆಂಚಪ್ಪಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಲೆಬೆನ್ನೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.