ಹರಿಯಾಣದಲ್ಲಿ ಕಲ್ಲು ತೂರಾಟ: 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ, ಇಂಟರ್ನೆಟ್ ಸ್ಥಗಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹರಿಯಾಣದಲ್ಲಿ ಮೇವಾತ್ ಪ್ರದೇಶದಲ್ಲಿ (Mewat region) ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ನುಹ್ ಜಿಲ್ಲೆಯ ನಂದ್ ಗ್ರಾಮದ ಬಳಿ ಹಿಂದು ಸಂಘಟನೆಯ ಕಾರ್ಯಕರ್ತರು ನಡೆಸುತ್ತಿದ್ದ ರ್ಯಾಲಿಯ ಮೇಲೆ ಜನರ ಗುಂಪೊಂದು ಕಲ್ಲು ತೂರಾಟ ಮಾಡಿದೆ.

ಹರಿಯಾಣದ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಮಾತೃಶಕ್ತಿ ದುರ್ಗಾ ವಾಹಿನಿಯಿಂದ ಸೋಮವಾರ ಬ್ರಜಮಂಡಲ ಯಾತ್ರೆ ಹೊರಡುವಾಗ ಕಲ್ಲುತೂರಾಟ ನಡೆಸಲಾಗಿದೆ. ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ, 40ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಗುಂಡಿನ ದಾಳಿಯಿಂದ ಇಬ್ಬರು ಸಾವು ಕಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ.

ನುಹ್ ಜಿಲ್ಲಾಡಳಿತವು ಇತರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿದೆ, ಜೊತೆಗೆ ಸೆಕ್ಷನ್ 144 ವಿಧಿಸುವುದರ ಜೊತೆಗೆ ಇಡೀ ಜಿಲ್ಲೆಯಲ್ಲಿ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಗಡಿಗಳನ್ನು ಮುಚ್ಚಲಾಗಿದೆ. ಬ್ರಜಮಂಡಲ ಯಾತ್ರೆಯು ನುಹ್‌ನಲ್ಲಿರುವ ನಲ್ಹಾದ್ ಶಿವ ದೇವಾಲಯದಿಂದ ಫಿರೋಜ್‌ಪುರ-ಜಿರ್ಕಾ ಕಡೆಗೆ ಹೊರಟಿತ್ತು. ಯಾತ್ರೆ ತಿರಂಗಾ ಪಾರ್ಕ್ ಬಳಿ ತಲುಪುತ್ತಿದ್ದಂತೆಯೇ ಅಲ್ಲಿ ಜನರ ಗುಂಪು ಎದುರಾಯಿತು. ಎರಡೂ ಕಡೆಯುವರು ಮುಖಾಮುಖಿ ಆಗುತ್ತಿದ್ದಂತೆ ವಾಗ್ವಾದ ನಡೆದು ಕಲ್ಲು ತೂರಾಟ ಆರಂಭವಾಗಿತ್ತು.

ಸೋಮವಾರ ಮಧ್ಯಾಹ್ನ ಮೊದಲ ಹಿಂಸಾಚಾರವು ತಿರಂಗಾ ಪಾರ್ಕ್ ಬಳಿ ಭುಗಿಲೆದ್ದಿತು, ಕೆಲವೇ ಸಮಯದಲ್ಲೇ ಅದು ಇಡೀ ನುಹ್ ನಗರವನ್ನು ಆವರಿಸಿತು. ಈ ಸಂದರ್ಭದಲ್ಲಿ, ಹಳೆಯ ಬಸ್ ನಿಲ್ದಾಣ, ಹೋಟೆಲ್ ಬೈಪಾಸ್, ಮುಖ್ಯ ಬಜಾರ್, ಅನಾಜ್ ಮಂಡಿ ಮತ್ತು ಗುರುಗ್ರಾಮ್-ಆಲ್ವಾರ್ ಹೆದ್ದಾರಿಯಲ್ಲಿ ಒಂದರ ನಂತರ ಒಂದರಂತೆ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಸಂಜೆ 5 ಗಂಟೆಯವರೆಗೆ ನುಹ್ ಚೌಕ್ ಉದ್ವಿಗ್ನವಾಗಿತ್ತು. ಪಾಲ್ಡಿ ರಸ್ತೆಯ ಸ್ಮಶಾನದ ಬಳಿ ಇರುವ ಕಾಳಿ ಮಾತೆಯ ದೇವಸ್ಥಾನವನ್ನೂ ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದೆ. ಮತ್ತೊಂದೆಡೆ, ಹಿಂಸಾಚಾರ ನಡೆದ ತಕ್ಷಣ, ಇಡೀ ನುಹ್ ನಗರದ ಮಾರುಕಟ್ಟೆಯನ್ನು ಮುಚ್ಚಲಾಗಿದೆ.ರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತವು ನೆರೆಯ ಪಲ್ವಾಲ್, ಫರಿದಾಬಾದ್ ಮತ್ತು ರೇವಾರಿ ಜಿಲ್ಲೆಗಳಿಂದ 10 ಕಂಪನಿ ಪೊಲೀಸರನ್ನು ಕರೆಸಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಮಾತೃಶಕ್ತಿ ದುರ್ಗಾವಾಹಿನಿಯ ಪರವಾಗಿ ಪ್ರತಿ ವರ್ಷ ಬ್ರಜಮಂಡಲ ಯಾತ್ರೆಯನ್ನು ನುಹ್ ಪ್ರದೇಶದಲ್ಲಿ ನಡೆಸಲಾಗುತ್ತದೆ. ಈ ಯಾತ್ರೆಯು ನುಹ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಫಿರೋಜ್‌ಪುರ ಜಿರ್ಕಾದ ಸಿಗರ್ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!