ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯಿಂದ ಅಸ್ಸಾಂ ರಾಜ್ಯ ಮತ್ತೆ ಜಲಾವೃತಗೊಂಡಿದೆ. ಅಸ್ಸಾಂನ ನದಿಗಳು ಪ್ರವಾಹದ ನೀರಿನಿಂದ ತುಂಬಿ ಹರಿಯುತ್ತಿದ್ದು, ಶಿವಸಾಗರ್ ಜಿಲ್ಲೆಯ ಡೆಮೋವ್‌ನಿಂದ ಒಬ್ಬರು ಸಾವನ್ನಪ್ಪಿರುವುದಾಗಿ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.
ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ, ಜೋರ್ಹತ್‌ನ ಗುವಾಹಟಿ ಮತ್ತು ನೆಮತಿಘಾಟ್‌ನ ಬ್ರಹ್ಮಪುತ್ರ ನದಿಯಲ್ಲಿ ದೋಣಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆಗಳು, ಸೇತುವೆಗಳು, ವಿದ್ಯುತ್ ಕಂಬಗಳು ಮತ್ತು ಶಾಲೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ನಿರಂತರ ಮಳೆಯಿಂದಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ನದಿಗಳ ನೀರಿನ ಹರಿವು ಅಪಾಯಕಾರಿ ಮಟ್ಟಕ್ಕಿಂತ ಹೆಚ್ಚಾಗಿದೆ.
ಈ ವರ್ಷ ಪ್ರವಾಹದಿಂದಾಗಿ 15 ಮಂದಿ ಸಾವನ್ನಪ್ಪಿದ್ದರೆ, 17 ಜಿಲ್ಲೆಗಳಲ್ಲಿ 2 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಲಖಿಂಪುರ ಮತ್ತು ಧೇಮಾಜಿ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ. ಒಟ್ಟು 427 ಮಂದಿ ಎರಡು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ 45 ಆಹಾರ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಬೇಕಿ, ಜಿಯಾ-ಭಾರಾಲಿ, ದಿಸಾಂಗ್, ಡಿಖೋವ್ ಮತ್ತು ಸುಬಾನ್ಸಿರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.