ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕಿಗೆ ಇಬ್ಬರು ಸಾವನ್ನಪ್ಪಿದ ಕಾರಣದಿಂದಾಗಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆರೋಗ್ಯ ಅಲರ್ಟ್ ಘೋಷಿಸಲಾಗಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನಿಫಾ ವೈರಸ್‌ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ಶಂಕಿಸಿದ್ದಾರೆ.
ಮೃತರಲ್ಲಿ ಒಬ್ಬರ ಸಂಬಂಧಿಕರನ್ನೂ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. 2018, 2021 ರಲ್ಲಿ ಕೋಝಿಕೋಡ್ ಜಿಲ್ಲೆಗಳಲ್ಲಿ ನಿಫಾ ವೈರಸ್ ಸೋಂಕಿನಿಂದ ಅನೇಕ ಜನರು ಸಾವನ್ನಪ್ಪಿದ್ದರು. ನಿಫಾ ವೈರಸ್‌ನ ಮೊದಲ ಪ್ರಕರಣವು 19 ಮೇ 2018 ರಂದು ಕೋಝಿಕ್ಕೋಡ್ ನಗರದಲ್ಲಿ ವರದಿಯಾಗಿತ್ತು.
ನಿಫಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ. ಕಲುಷಿತ ಆಹಾರದ ಮೂಲಕವೂ ರೋಗ ಹರಡುತ್ತದೆ. ಈ ಕಾಯಿಲೆಯ ಸೋಂಕು ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ಗೆ ಕಾರಣವಾಗುತ್ತದೆ. ನಿಫಾ ವೈರಸ್ ಹೆಚ್ಚಾಗಿ ಹಂದಿಗಳಿಂದ ಹರಡುತ್ತದೆ.