ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಟ ನಾಗಭೂಷಣ್ ಕಾರು ಅಪಘಾತದಲ್ಲಿ (Accident) ಮಹಿಳೆಯೋರ್ವರು ಸಾವಿಗೀಡಾಗಿದ್ದು ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಹಿನ್ನೆಲೆ ಪೊಲೀಸರ ಬಂಧನದಲ್ಲಿ ನಟ ನಾಗಭೂಷಣ್ನನ್ನು ಸ್ಟೇಷನ್ ಬೇಲ್ ಆಧಾರದಲ್ಲಿ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಶನಿವಾರ ರಾತ್ರಿ ರಾಜರಾಜೇಶ್ವರಿ ನಗರದ ಸ್ನೇಹಿತನ ಮನೆಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಇನ್ನು ಘಟನೆ ನಡೆದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಅಪಘಾತದ ಮಾಡಿದ ಕಾರಣದಿಂದ ನಟನನ್ನು ಕುಮಾರಸ್ವಾಮಿ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದರು. ಇದಾದ ನಂತರ, ಮೃತಳ ಮಗ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 279 ಅತಿ ವೇಗದ ಚಾಲನೆ, ಐಪಿಸಿ ಸೆಕ್ಷನ್ 337 ನಿರ್ಲಕ್ಷ್ಯತನದ ಚಾಲನೆ ಹಾಗೂ ಸೆಕ್ಷನ್ 304ಎ ನಿರ್ಲಕ್ಷ್ಯ ಚಾಲನೆಯಿಂದ ಸಾವು ಕುರಿತ ಪ್ರಕರಣಗಳ ಅಡಿಯಲ್ಲಿ ನಟ ನಾಗಭೂಷಣ್ ವಿರುದ್ಧ ದೂರು ದಾಖಲಿಸಲಾಗಿತ್ತು. ರಾತ್ರಿ ಪೂರ್ತಿ ಜೈಲಿನಲ್ಲಿ ಕಳೆದ ನಟ ನಾಗಭೂಷಣ್ ಬೆಳಗ್ಗೆ ಸ್ಟೇಷನ್ ಬೇಲ್ ಆಧಾರದಲ್ಲಿ ಬಂಧನದಿಂದ ಮುಕ್ತಿ ಪಡೆದಿದ್ದಾರೆ.
ಮೃತ ಪ್ರೇಮ ಮಗಳು ಯಶಸ್ವಿನಿ ಮಾಧ್ಯಮಗಳೊಂದಿಗೆ ಮಾತನಾಡಿ, ನಿನ್ನೆ ರಾತ್ರಿ ಘಟನೆಯಾದಾಗ ನಾನು ಸ್ಥಳದಲ್ಲಿದ್ದೆನು. ಅಪಾರ್ಟ್ ಮೆಂಟ್ ಮುಂಭಾಗ ನಮ್ಮ ತಂದೆ ತಾಯಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಜೋರಾಗಿ ಸೌಂಡ್ ಬಂತು. ಹೋಗಿ ನೋಡುದ್ರೆ ಅಪಘಾತವಾಗಿತ್ತು. ನಾಗಭೂಷಣ್ ಸಹ ಆಸ್ಪತ್ರೆಗೆ ಬಂದಿದ್ದರು. ಓವರ್ ಸ್ಪಿಡಲ್ಲಿ ಬಂದು ಗುದ್ದಿದ್ದಾನೆ. ನನ್ನ ತಾಯಿ ನಾಗಭೂಷಣ್ ಸಿನಿಮಾ ನೋಡ್ತಿದ್ದರು. ಚೆನ್ನಾಗಿ ಆಕ್ಟ್ ಮಾಡ್ತಾನೆ ಅಂತ ಹೇಳ್ತಿದ್ದರು. ಈಗ ಅವನೇ ಹೀಗ್ ಮಾಡಿದ್ದಾನೆ. ಕಷ್ಟ ಪಟ್ಟು ನಂತರ ಅಣ್ಣಾ ಈಗ ದುಡಿಯಲು ಪ್ರಾರಂಭ ಮಾಡಿದ್ದನು. ಇನ್ಮೇಲೆ ಚೆನ್ನಾಗಿರಬಹುದು ಅಂತ ಅನ್ಕೊಂಡಿದ್ದೆವು, ಆದರೆ ಈಗ ನೋಡುದ್ರೆ ಹೀಗಾಗಿದೆ ಎಂದು ಮೃತಳ ಪುತ್ರಿ ಅಳಲು ತೋಡಿಕೊಂಡಿದ್ದಾರೆ.