ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅ.10ರಿಂದ 25ರವರೆಗೆ ದಸರಾ ರಜೆಯನ್ನು ಘೋಷಿಸಿ ಸರಕಾರ ಆದೇಶಿಸಿದೆ.
ಸರಕಾರದ ಶಾಲಾ ಶಿಕ್ಷಣ ಇಲಾಖೆಯ ಈ ಹಿಂದಿನ ಸುತ್ತೋಲೆಯನ್ವಯ ಜಿಲ್ಲೆಯಲ್ಲಿ ಅ.8ರಿಂದ 24ರವರೆಗೆ ದಸರಾ ರಜೆ ಎಂದು ಘೋಷಿಸಲಾಗಿತ್ತು.
ಆದರೆ ಜಿಲ್ಲೆಯ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ಅ.24ರಂದು ದಸರಾ ಪ್ರಯುಕ್ತ ಶೋಭಾಯಾತ್ರೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಈ ಹಿಂದೆ ಘೋಷಿಸಿದ್ದ ರಜೆಯನ್ನು ಅ.26ರವರೆಗೆ ವಿಸ್ತರಿಸುವಂತೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಕೋರಿದ ಹಿನ್ನೆಲೆಯಲ್ಲಿ ಇದೀಗ ರಜೆಯ ದಿನಾಂಕವನ್ನು ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಅದರಂತೆ ಜಿಲ್ಲೆಯಲ್ಲಿ ಅ.10ರಿಂದ 25ರವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಇರುತ್ತದೆ.ಅ.26ರಂದು ಶಾಲೆಗಳು ಪುನರಾಂಭಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ವೆಂಕಟರಾಜ ಅವರು ತಿಳಿಸಿದ್ದಾರೆ.