ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮಿ ಯೋಜನೆಯ (Gruhalakshmi Yojana) ಮೂಲಕ ಬಂದ ಹಣ 2,000 ರೂ.ಗಳನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಎಂದು ಮಹಿಳೆಯರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸಲಹೆ ನೀಡಿದ್ದಾರೆ.
ಮಾಗಡಿಯ ಕುದೂರಿನಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದಾರೆ.
ಮಹಿಳೆಯರೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಿಮ್ಮ ಗಂಡಂದಿರಿಗೆ ನೀಡಬೇಡಿ, ಉಳಿತಾಯ ಮಾಡಿ, ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇದಕ್ಕೂ ಮುನ್ನ ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡಿದ ಡಿಕೆಶಿ, ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶಗಳಿಗೆ ಶಿಕ್ಷಣಕ್ಕೆ ವಲಸೆ ಹೋಗುವುದು ತಪ್ಪಬೇಕು. ಅದಕ್ಕಾಗಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ನಿರ್ಮಾಣ ಮಾಡಬೇಕೆಂಬುದು ಸರ್ಕಾರದ ಕನಸಾಗಿದೆ. ಆದಷ್ಟು ಬೇಗ ಇದನ್ನು ಕಾರ್ಯಗತ ಮಾಡಲಿದ್ದೇವೆ. ಗ್ರಾಮೀಣ ಭಾಗದಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲು ಹೊರಟಿರುವುದು ಕ್ರಾಂತಿಕಾರಿ ಆಲೋಚನೆ. ಇಂತಹ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲು ಹೊರಟಿರುವ ಟೊಯೋಟೊ ಕಿರ್ಲೋಸ್ಕರ್ ಸಂಸ್ಥೆಗೆ ನಾವೆಲ್ಲಾ ಅಭಾರಿಯಾಗಿರುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ 88% ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದೆ. ಮಿಕ್ಕ ಅರ್ಜಿದಾರರಿಗೆ ಬ್ಯಾಂಕ್ ಖಾತೆ ಸಮಸ್ಯೆಯಿಂದ ಹಣ ತಲುಪಿಲ್ಲ ಈ ಸಮಸ್ಯೆಯನ್ನು ಬೇಗ ಬಗೆಹರಿಸಲಾಗುವುದು. ಬೆಲೆ ಏರಿಕೆಯಿಂದ ನಮ್ಮ ಗ್ರಾಮೀಣ ಪ್ರದೇಶದ ಜನರು ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸ್ವಲ್ಪ ಉಸಿರಾಡುವಂತೆ ಮಾಡಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,58,000 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಹಣ ತಲುಪಿಸಿದ್ದೇವೆ ಎಂದು ಹೇಳಿದ್ದಾರೆ.