ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸುತ್ತಿದ್ದೆ ತಪ್ಪು ಎಂದು ಪ್ರಯಾಣಿಕನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕರಣ ದಾಖಲಿಸಿದೆ.
ನಮ್ಮ ಮೆಟ್ರೋದಲ್ಲಿ ಜಯನಗರ ಮತ್ತು ಸಂಪಿಗೆ ರಸ್ತೆಯ ನಡುವೆ ನಿತ್ಯ ಪ್ರಯಾಣಿಸುತ್ತಿದ್ದ ವ್ಯಕ್ತಿ ಪ್ರಯಾಣದ ವೇಳೆ ಗೋಬಿ ಮಂಚೂರಿ ಸೇವಿಸಿದ್ದು, ಈ ವೇಳೆ ಸ್ನೇಹಿತರು ಮೆಟ್ರೋ ಬೋಗಿಯೊಳಗೆ ಆಹಾರ ಸೇವಿಸದಂತೆ ತಿಳಿಸಿದ್ದಾರೆ. ಈ ಸಲಹೆಯನ್ನು ನಿರ್ಲಕ್ಷಿಸಿದ ಆತ ಆಹಾರ ಸೇವಿಸಿದ್ದಾನೆ.
ಹೀಗಾಗಿ ಆತನ ವಿರುದ್ಧ ದೂರು ದಾಖಲಿಸಿದ್ದು, ರೈಲು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡದ ಬರೆ ಎಳೆದಿದೆ. ಬಿಎಂಆರ್‌ಸಿಎಲ್ ಈ ರೀತಿಯ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದರು.
ನಿಯಮಗಳ ಪ್ರಕಾರ, ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುವಂತಿಲ್ಲ. ಆದರೆ ಪ್ರಯಾಣಿಕ ನಿಯಮ ಉಲ್ಲಂಘಿಸಿ ಆಹಾರ ಸೇವಿಸಿದ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಗೆ ಬಿಎಂಆರ್‌ಸಿಎಲ್ ದೂರು ನೀಡಿದೆ. ಇಂತಹ ತಪ್ಪು ಮರುಕಳಿಸುವುದಿಲ್ಲ ಎಂದು ಪ್ರಯಾಣಿಕ ಭರವಸೆ ನೀಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
ಆಡಿಯೋ ಮತ್ತು ವಿಡಿಯೋ ಸಂದೇಶಗಳ ಮೂಲಕ, ಮೆಟ್ರೋ ಸೇವೆಗಳನ್ನು ಬಳಸುವಾಗ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಬೇಡಿ, ತೊಂದರೆಯನ್ನು ಆಹ್ವಾನಿಸಬೇಡಿ ಎಂದು ನಾವು ಪ್ರಯಾಣಿಕರಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.