ಹೊಸದಿಗಂತ ವರದಿ, ಶಿವಮೊಗ್ಗ:
ಈ ಬಾರಿ ಮಹಿಳಾ ದಸರಾವನ್ನು ನಾಲ್ಕು ದಿನಗಳ ಬದಲಿಗೆ ಎರಡು ದಿನ ಆಚರಿಸಲಾಗುವುದು ಎಂದು ಮಹಿಳಾ ದಸರಾ ಸಮಿತಿ ಸದಸ್ಯೆ ಸುರೇಖಾ ಮುರುಳೀಧರ ತಿಳಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ದಸರಾ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸರಳ ದಸರಾ ಆಚರಿಸಲು ಸೂಚನೆ ನೀಡಿದೆ. ಇರುವ ಲಭ್ಯ ಅನುದಾನ ನೋಡಿಕೊಂಡು ಕಡಿಮೆ ಖರ್ಚಿನಲ್ಲಿಯೇ ಅದ್ಧೂರಿಯಾಗಿ ಮಹಿಳಾ ದಸರಾ ಆಚರಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಸದಸ್ಯೆ ಆರತಿ ಆ.ಮ. ಪ್ರಕಾಶ್ ಮಾತನಾಡಿ, ಮಹಿಳಾ ದಸರಾ ಸ್ಪರ್ಧೆಗಳನ್ನು ಅಕ್ಟೋಬರ್ 09ರಂದು ನಡೆಸಲಾಗುವುದು. ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್, ಬಕೆಟ್ ಇನ್ ದ ಬಾಲ್, ಚಮಚದಲ್ಲಿ ಲಿಂಬೆ ಹಣ್ಣು ಓಟ ಸ್ಪರ್ಧೆಗಳು ಬೆಳಗ್ಗೆ ನಡೆಯಲಿದೆ. ರಂಗೋಲಿ ಸ್ಪರ್ಧೆ ಕೂಡಾ ಇದ್ದು, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಪಾಲಿಕೆ ವತಿಯಿಂದಲೇ ನೀಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇದೆ. ಮಾಹಿತಿಗಾಗಿ ಸಂಗೀತಾ ನಾಗರಾಜ್-9663795804, ರೇಣು: 9901351025, ಗೀತಾ: 9739604190 ಸಂಪರ್ಕಿಸಿ ಎಂದರು.
ಅಕ್ಟೋಬರ್ 16ರ ಸಂಜೆ 5 ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಮೂಹ ಗಾಯನ ಸ್ಪರ್ಧೆ ಹಾಗೂ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಸಂಗೀತಾ ನಾಗರಾಜ್, ಸದಸ್ಯರಾದ ಸುವರ್ಣ ನಾಗರಾಜ್ ಹಾಜರಿದ್ದರು. ನಗರದ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಪಾಲ್ಗೊಂಡು ಸಲಹೆಗಳನ್ನು ನೀಡಿದರು.