ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಈ ಹಿನ್ನೆಲೆ ಭಾರತದ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಇಸ್ರೇಲ್ಗೆ ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಅಕ್ಟೋಬರ್ 14ರ ವರೆಗೆ ನಿಲ್ಲಿಸಿದೆ.
ಇಸ್ರೇಲ್ನ ಪ್ರಮುಖ ನಗರ ಟೆಲ್ ಅವೀವ್ಗೆ ಹೊರಡುವ ಮತ್ತು ಅಲ್ಲಿಂದ ಬರುವ ತನ್ನೆಲ್ಲಾ ವಿಮಾನಗಳನ್ನು ಮುಂದಿನ 6 ದಿನಗಳ ಕಾಲ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ.
‘ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಯಾವುದೇ ವಿಮಾನದ ಬುಕ್ಕಿಂಗ್ ಮಾಡಿಸಿದಲ್ಲಿ ಅಂತಹ ಪ್ರಯಾಣಿಕರಿಗೆ ಏರ್ಲೈನ್ ಸಾಧ್ಯವಿರುವ ಎಲ್ಲ ನೆರವು ನೀಡಲಿದೆ’ ಎಂದು ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಟೆಲ್ ಅವೀವ್ಗೆ ವಾರದಲ್ಲಿ ಐದು ವಿಮಾನಗಳನ್ನು ನಿರ್ವಹಿಸುತ್ತದೆ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ವಿಮಾನಗಳು ಅಲ್ಲಿಗೆ ತೆರಳುತ್ತವೆ. ದಾಳಿ ಶುರುವಾದ ಶನಿವಾರವೇ ಟೆಲ್ ಅವಿವ್ಗೆ ತೆರಳುವ ಮತ್ತು ಅಲ್ಲಿಂದ ಬರುವ ತನ್ನ ವಿಮಾನಗಳನ್ನು ಏರ್ಲೈನ್ಸ್ ರದ್ದುಗೊಳಿಸಿತ್ತು.