ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಭಾರತೀಯ ಮೂಲದ ಮಹಿಳೆ ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಮಹಿಳೆ ಶೀಜಾ ಆನಂದ್ (41) ರಾಕೆಟ್ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಇಸ್ರೇಲ್‌ನಲ್ಲಿ ದಾಳಿ ಆರಂಭವಾದ ನಂತರ ಆಕೆ ತನ್ನ ಕುಟುಂಬವನ್ನು ಸಂಪರ್ಕಿಸಿ ಸುರಕ್ಷಿತವಾಗಿರುವುದಾಗಿ ತಿಳಿಸಿದರು. ಎರಡನೇ ಬಾರಿ ಕರೆ ಮಾಡಿ ಮಾತನಾಡುವಾಗ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಂಡಿತ್ತು. ಮರುದಿನ ಮತ್ತೊಂದು ಕರೆ ಸ್ವೀಕರಿಸಿದ ಶೀಜಾ ಕುಟುಂಬಸ್ಥರಿಗೆ ಆಘಾತ ಕಾದಿತ್ತು. ದಾಳಿಯಲ್ಲಿ ಆಕೆ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಬರಸಿಡಿಲಿನಂತೆ ವಕ್ಕರಿಸಿತ್ತು.
ಮತ್ತೊಂದು ಶಸ್ತ್ರಚಿಕಿತ್ಸೆಗಾಗಿ ಆಕೆಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ದೂರವಾಣಿ ಕರೆ ಮೂಲಕ ಗೊತ್ತಾಯಿತು. ಸದ್ಯ ಶೀಜಾ ಅವರ ಆರೋಗ್ಯ ಸ್ಥಿತಿಗತಿ ಹೇಗಿದೆ ಎಂಬುದರ ಹೆಚ್ಚಿನ ಮಾಹಿತಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಇಸ್ರೇಲ್ ನಲ್ಲಿ ಶೀಜಾ ಕೆಲಸ ಮಾಡುತ್ತಿದ್ದು, ಅವರ ಪತಿ ಮತ್ತು ಇಬ್ಬರು ಮಕ್ಕಳು ಭಾರತದಲ್ಲಿದ್ದಾರೆ.