ಹೊಸದಿಗಂತ ವರದಿ ಹುಬ್ಬಳ್ಳಿ:
ಮಹಿಷಾಸುರನೇ ಆಗಿರಲಿ ಹಮಾಸ್ ಉಗ್ರರೆ ಆಗಿರಲಿ, ಲಷ್ಕರ್ ಎ ತೊಯ್ಬಾ ಆಗಿರಲಿ ಕಾಂಗ್ರೆಸ್ ಸದಾ ರಾಕ್ಷಸರನ್ನು ಬೆಂಬಲಿಸುತ್ತಿದೆ ಎಂದು ನಮೋ ಬ್ರಿಗೆಡ್ ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದಲ್ಲಿ ನಮೋ ಬ್ರಿಗೆಡ್ ನಿಂದ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ಸಿನವರು ಅವಕಾಶ ಸಿಕ್ಕರೆ ಹಮಾಸ್ ಉಗ್ರರ ಜಯಂತಿ ಆಚರಿಸುತ್ತಾರೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಮುಸಲ್ಮಾನರಲ್ಲಿ ಪ್ರವಾದಿ ಮಹಮ್ಮದ ಜಯಂತಿ ಬಿಟ್ಟರೇ ಬೇರೆ ಜಯಂತಿ ಆಚರಿಸುವ ಪದ್ಧತಿ ಇಲ್ಲ, ಆದರೆ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಣೆ ಆರಂಭಿಸಿದೆ. ಮಹಿಷ ದಸರಾ ಈ ಬಾರಿ ಅಧಿಕೃತವಾಗಿ ಮಾಡಲು ಯೋಜಿಸಿದ್ದಾರೆ. ಹಮಾಸ್ ಉಗ್ರರಿಗೆ ಬೆಂಬಲ ನೀಡಿದ್ದಾರೆ ಹೀಗೆ ರಾಕ್ಷಸರನ್ನು ವೈಭವಿಕರಿಸುವುದು ಕಾಂಗ್ರೆಸ್ಸಿನ ರೂಢಿಯಾಗಿದೆ ಎಂದು ಹೇಳಿದರು.
ಹಿಂದು ಸಂಘಟನೆಗೆ ಸಂಬಂಧಿಸಿದ ಮೆರವಣಿಗೆಯಲ್ಲಿ ಗೋಡ್ಸೆ ಭಾವಚಿತ್ರವಿದ್ದದ್ದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಚಕ್ರವರ್ತಿ ಸೂಲಿಬೆಲೆಯವರು ಹೇಳಿದ್ದು- “ಗಾಂಧಿಹತ್ಯೆಯ ಕೃತ್ಯವನ್ನು ಯಾರೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಭಾರತ ಮತ್ತು ಹಿಂದುಗಳ ಬಗ್ಗೆ ಗೋಡ್ಸೆ ಹೇಳಿದ್ದ ಕೆಲವು ವಿಚಾರಗಳಿಗೆ ನೆನಪು ಮಾಡಿಕೊಂಡಿದ್ದಿರಬಹುದು. ಆದರೆ ಕ್ರೂರ ಔರಂಗಜೇಬನದ್ದೇ ಅಖಂಡ ಭಾರತ ಎಂದು ಚಿತ್ರಿಸುವ ಮನಸ್ಥಿತಿ ಭೀಕರವಾದದ್ದು” ಎಂದಿದ್ದಾರೆ.