ಹೊಸದಿಗಂತ ವರದಿ ಬೆಳಗಾವಿ:
ತೆರಿಗೆ ಸಂಗ್ರಹ ಮಾಡಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಆಡಳಿತ ಇರುವ ಬೆಳಗಾವಿ ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಶೋಕಾಸ್ ಈಗ ಜಟಾಪಟಿಗೆ ಮುನ್ನುಡಿ ಬರೆದಂತಾಗಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆ ಸಂಗ್ರಹ ಹೆಚ್ಚಳ ಮಾಡಬೇಕೆಂಬುದು ಸರ್ಕಾರದ ನಿಯಮ. ಆದರೆ ಸರ್ಕಾರದ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ನೋಟೀಸಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, 2023-24ರ ಕಂದಾಯ ತೆರಿಗೆ ಸಂಗ್ರಹ ಮಾಡಲಾಗಿದೆ. ಪಾಲಿಕೆ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿದ್ದ ಸಂದರ್ಭದಲ್ಲಿ 2021-22ರಲ್ಲಿಯೇ ತೆರಿಗೆ ಸಂಗ್ರಹವನ್ನು ಉಲ್ಲೇಖಿಸಿ ಈ ನೋಟೀಸ್ ನೀಡಲಾಗಿದೆ ಎಂಬುದು ಪಾಲಿಕೆ ಆಡಳಿತ ನಡೆಸುತ್ತಿರುವ ಬಿಜೆಪಿ ವಾದ.
ಪೌರಾಡಳಿತ ಮತ್ತು ನಗರಾಭಿವೃದ್ದಿ ಸಚಿವರ ಮೂಲಕ ಪಾಲಿಕೆ ಆಯುಕ್ತರಿಗೆ ಶೋಕಾಸ್ ನೋಟೀಸ್ ನೀಡಿರುವ ಸರ್ಕಾರದ ಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಏಕೆ, ಬಿಜೆಪಿ ಆಡಳಿತ ಎಂಬ ಕಾರಣಕ್ಕಾಗಿಯೇ ಈ ದ್ವೇಷ ಸಾಧಿಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಸಭಾನಾಯಕ ಡೋಣಿ ಅವರು, ಪಾಲಿಕೆ ಅಯುಕ್ತರಿಗೆ ನೋಟಿಸ್ ಬಂದಿದ್ದು ಉತ್ತರ ನೀಡಲಾಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ನಿಯಮಾವಳಿಯಂತೆ ತೆರಿಗೆ ಹೆಚ್ಚಳ ಮಾಡಲು ಕ್ರಮ ಕೈಗೊಂಡಿದ್ದೇವೆ. ಇದರಲ್ಲಿ ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.