ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆಯಾದ ‘ರಾಪಿಡ್‌ಎಕ್ಸ್’ ಗೆ ‘ನಮೋ ಭಾರತ್’ ರೈಲು ಎಂದು ಹೆಸರಿಸಲಾಗಿದೆ.
ಅಕ್ಟೋಬರ್ 20 ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ.
ಆರ್‌ಆರ್‌ಟಿಎಸ್ ಭಾಗವಾದ ದೆಹಲಿ-ಗಾಜಿಯಾಬಾದ್-ಮೀರಠ್ ನಡುವಿನ 17 ಕಿ.ಮೀ.ಉದ್ದದ ಮಾರ್ಗದಲ್ಲಿ ಈ ರೈಲುಗಳು ಅ. 21ರಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿವೆ.
ಇದು ಪ್ರಮುಖ ನಗರಗಳನ್ನು ಸೇರಿಸುವ ರೈಲು ಯೋಜನೆಯಾಗಿದ್ದು, ಇಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ತ್ವರಿತವಾಗಿ ಪ್ರಯಾಣಿಕರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊಯ್ಯಲಿವೆ. ದೆಹಲಿ ಮತ್ತು ಗಾಜಿಯಾಬಾದ್ ನಡುವಿನ 17 ಕಿ.ಮೀ. ಮಾರ್ಗವನ್ನು ಉದ್ಘಾಟಿಸಲಾಗುತ್ತಿದ್ದು, ಇದರಲ್ಲಿ ಶಹೀಬಾಬಾದ್, ಗಾಜಿಯಾಬಾದ್, ಗುಲ್ದಾರ್, ದುಹೈ ಮತ್ತು ದುಹೈ ಡಿಪೋದಲ್ಲಿ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ.
ಕಾಂಗ್ರೆಸ್ ಟೀಕೆ:
ಆರ್‌ಆರ್‌ಟಿಎಸ್ ರೈಲುಗಳಿಗೆ ‘ನಮೋ ಭಾರತ್’ ಎಂದು ಹೆಸರಿಸಿರುವುದನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಗುರುವಾರ ಟೀಕಾಪ್ರಹಾರ ನಡೆಸಿದೆ.
‘ನಮೋ ಸ್ಟೇಡಿಯಂ ನಂತರ ಈಗ ನಮೋ ರೈಲುಗಳು. ಅವರ ಸ್ವಯಂ ಗೀಳಿಗೆ ಮಿತಿ ಎಂಬುದೇ ಇಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.