ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃದಯಾಘಾತದಿಂದಾಗಿ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ನಿಧನರಾಗಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಕೇಂದ್ರ ಸಮಿತಿಗಳ ರಾಜಕೀಯ ಬ್ಯೂರೋದ ಸ್ಥಾಯಿ ಸಮಿತಿಯ ಸದಸ್ಯ ಮತ್ತು ಮಾಜಿ ಪ್ರಧಾನಿ 68 ವರ್ಷದ ಲಿ ಕೆಕಿಯಾಂಗ್ ಶುಕ್ರವಾರ ಶಾಂಘೈನಲ್ಲಿ ನಿಧನರಾದರು.
2013 ರಿಂದ 10 ವರ್ಷಗಳ ಕಾಲ ಚೀನಾ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಲಿ ಕೆಕಿಯಾಂಗ್, ಈ ವರ್ಷದ ಮಾರ್ಚ್‌ನಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದರು.
ಲಿ ಕೆಕಿಯಾಂಗ್ ತಮ್ಮ ದೇಶಕ್ಕೆ ಕೊಡುಗೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕಮ್ಯುನಿಸ್ಟ್ ಪಕ್ಷವನ್ನು ಪ್ರವೇಶಿಸಿದರು. ಆದರೆ, ಅದರ ಕಠಿಣವಾದ ರೆಡ್-ಟ್ಯಾಪಿಸಂನಿಂದ ಉಸಿರುಗಟ್ಟಿದರು ಎಂದು ಅಲ್ಲಿನ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅವರ ಅಗಲಿಕೆ ದೇಶದ ಖಾಸಗಿ ವಲಯದ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟು ಹಾಕಿದೆ ಎಂದರು.
ಕ್ಸಿ ಜಿನ್‌ಪಿಂಗ್ ಅವರ ಸೈದ್ಧಾಂತಿಕ ಟೋನ್ ಮತ್ತು ಸರ್ವಾಧಿಕಾರಿ ಧೋರಣೆಗಳಿಗೆ ವಿರುದ್ಧವಾದ ಆಡಳಿತದ ಕಡೆಗೆ ಲಿ ಕೆಕಿಯಾಂಗ್ ನಡೆಯಿತ್ತು. ಅವರ ನಾಯಕತ್ವದಲ್ಲಿ ಚೀನಾದ ಆರ್ಥಿಕತೆಯ ಬೆಳವಣಿಗೆ ದ್ವಿಗುಣಗೊಂಡಿತ್ತು ಎಂದೂ ಹೇಳಲಾಗುತ್ತಿದೆ.