ಹೊಸದಿಗಂತ ಡಿಜಿಟಲ್ ಡೆಸ್ಕ್
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಅಧಿಕಾರಕ್ಕೆ ತಂದರೆ ಹಿಂದುಳಿದ ವರ್ಗದ ನಾಯಕನನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಸೂರ್ಯಪೇಟ್ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ತೆಲಂಗಾಣದ ಜನತೆಗೆ ಒಂದು ಮಾತು ಹೇಳ ಬಯಸುತ್ತೇನೆ. ನೀವು ಬಿಜೆಪಿಗೆ ಆಶೀರ್ವಾದ ಮಾಡಿ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರೆ, ಮುಂದಿನ ಮುಖ್ಯಮಂತ್ರಿ ಹಿಂದುಳಿದ ವರ್ಗದವರೇ ಆಗಿರುತ್ತಾರೆ. ಹಿಂದುಳಿದ ವರ್ಗದ ನಾಯಕರನ್ನು ಸಿಎಂ ಮಾಡಲು ನಿರ್ಧರಿಸಿದ್ದೇವೆ’ ಎಂದು ಶಾ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಹಾಗೂ ತೆಲಂಗಾಣದ ಆಡಳಿತಾರೂಢ ಬಿಆರ್ಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು,ಎರಡೂ ವಂಶಪಾರಂಪರ್ಯ ಪಕ್ಷಗಳು. ರಾಜ್ಯಕ್ಕೆ ಆ ಪಕ್ಷಗಳು ಒಳ್ಳೆಯದು ಮಾಡುವುದಿಲ್ಲ ಎಂದರು.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಮಗ ಕೆ.ಟಿ.ರಾಮರಾವ್ ಅವರನ್ನು ಮುಖ್ಯಮಂತ್ರಿ ಮಾಡಲು ಬಯಸಿದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಬಯಸುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಮಾಡುವುದು ಹಾಗೂ ದಲಿತರಿಗೆ ಮೂರು ಎಕರೆ ಜಮೀನು ಒದಗಿಸುವುದು ಸೇರಿ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಸಿಎಂ ಕೆಸಿಆರ್ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.