ಹೊಸದಿಗಂತ ವರದಿ ಚಿಕ್ಕಮಗಳೂರು :
ಆಲ್ದೂರು ಅರಣ್ಯ ವಲಯದ ಕುಂದೂರು ಗ್ರಾಮದ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಸಾಕಾನೆಗಳ ನೆರವಿನೊಂದಿಗೆ ಕಾಡಾನೆಯೊಂದನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ತೋಟ ಕಾರ್ಮಿಕರು, ಕಾಫಿ ಬೆಳೆಗಾರರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಕೆಲವು ದಿನಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆಗೆ ಕೊನೆಗೂ ಫಲ ಸಿಕ್ಕಿದೆ.
ಕುಂದೂರು ಅರಣ್ಯದಲ್ಲಿ ಬುಧವಾರ ಕಂಡುಬಂದಿದ್ದ ಕಾಡಾನೆಯನ್ನು ಬೆನ್ನು ಹತ್ತಿದ ಸಿಬ್ಬಂದಿಗಳು ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆ ಹಿಡಿದಿದ್ದಾರೆ.
ಈಗ ಸೆರೆ ಸಿಕ್ಕಿರುವ ಆನೆ ಇತ್ತೀಚೆಗೆ ಆಲ್ದೂರು ಸಮೀಪ ಕಾರ್ಮಿಕ ಮಹಿಳೆ ಮೀನಾ ಎಂಬಾಕೆಯನ್ನು ಬಲಿ ತೆಗೆದುಕೊಂಡ ಆನೆಯೇ ಎನ್ನುವುದನ್ನು ಇನ್ನು ಸ್ಪಷ್ಟವಾಗಿಲ್ಲ.
ಆನೆ ಕಾರ್ಯಚರಣೆಯನ್ನು ಮುಂದುವರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡಿಗೆರೆ ಪ್ರವಾಸದಲ್ಲಿದ್ದಾಗಲೇ ಕಾಡಾನೆಯು ಮಹಿಳೆಯನ್ನು ಬಲಿ ಪಡೆದಿತ್ತು.
ಒಂದು ಪುಂಡಾನೆಯನ್ನು ಸೆರೆ ಹಿಡಿಯುವ ಜೊತೆಗೆ ಉಪಟಳ ನೀಡುತ್ತಿರುವ ಆರು ಆನೆಗಳ ಹಿಂಡನ್ನು ಕಾಡಿಗೆ ಹಿಮ್ಮೆಟ್ಟಿಸುವಂತೆ ಅದೇ ದಿನ ಮುಖ್ಯಮಂತ್ರಿಗಳು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು.
ಸಕ್ರೆಬೈಲು ಆನೆ ಬಿಡಾರದಿಂದ ಮೂರು ಸಾಕಾಣಿಗಳ ನ್ನು ಕರೆತಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.