ಹೊಸದಿಗಂತ ವರದಿ, ಶಿವಮೊಗ್ಗ:
ಸಾಗರ ಪಟ್ಟಣಕ್ಕೆ ಟ್ರಾಫಿಕ್ ಠಾಣೆ ಆರಂಭಿಸುವ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರಸ್ತಾವನೆ ಬಂದಿದ್ದು ಪರಿಶೀಲಿಸಲಾಗುತ್ತಿದೆ ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ತ್ಯಾಗರಾಜನ್ ತಿಳಿಸಿದರು.
ಸಾಗರದ ಪೇಟೆ ಠಾಣೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಾಗರಕ್ಕೆ ಟ್ರಾಫಿಕ್ ಠಾಣೆ ಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು ಸ್ಥಳೀಯವಾಗಿರುವ ಅಗತ್ಯತೆ ಮನಗಂಡು ಶೀಘ್ರದಲ್ಲೇ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ದಾವಣಗೆರೆ ವ್ಯಾಪ್ತಿಯ ಚನ್ನಗಿರಿ, ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ ಇನ್ನಿತರೆ ಕಡೆ ಟ್ರಾಫಿಕ್ ಸ್ಟೇಷನ್ ಬೇಡಿಕೆ ಇದೆ. ಸ್ಥಳೀಯವಾಗಿರುವ ಜನ ಮತ್ತು ವಾಹನದಟ್ಟಣೆಯನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನಂತರ ಮಂಜೂರು ಮಾಡಲಾಗುತ್ತದೆ. ಸಾಗರ ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದರು.