ಡಿಕೆಶಿ ವಿರುದ್ಧದ ಕೇಸ್ ಹಿಂಪಡೆಯುವ ಸಂಪುಟದ ನಿರ್ಧಾರಕ್ಕೆ ಈಶ್ವರಪ್ಪ ಕಿಡಿ

ಹೊಸದಿಗಂತ ವರದಿ ಶಿವಮೊಗ್ಗ:

ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲಿರುವ ಸಿಬಿಐ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ‌ ನಿರ್ಧರಿಸಿರುವುದರ ಕುರಿತಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಆರ್ಥಿಕ ಅಪರಾಧ ಪ್ರಕರಣದಲ್ಲಿ ಕೇಸು ವಾಪಸ್ ಪಡೆಯುತ್ತಿರುವುದು ದೇಶದಲ್ಲಿಯೇ ಇದು ಮೊದಲಾಗಿದೆ. ಈ ರೀತಿ ಮಾಡುವುದು ಸಂವಿಧಾನಕ್ಕೆ ಮಾಡುವ ದ್ರೋಹ. ಕಾನೂನಿಗೆ ಮಾಡುವ ಅಪಚಾರವೆಂದು ವಾಗ್ದಾಳಿ ನಡೆಸಿದರು.

ರಾಜಕೀಯ ಅಸ್ತಿತ್ವಕ್ಕಾಗಿ ಸಿಬಿಐ ಪ್ರಕರಣ ವಾಪಸ್ ಪಡೆಯುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದು ಯಾರ ರಾಜಕೀಯ ಅಸ್ತಿತ್ವಕ್ಕೆ ಎಂದು ಪ್ರಶ್ನಿಸಿದ ಅವರು, ಸಂವಿಧಾನ ಪಾಲಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈ ತೀರ್ಮಾನ ಮಾಡಿದಂತಿದೆ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಲೂಟಿಕೋರರನ್ನು ಕಾಂಗ್ರೆಸ್ ರಕ್ಷಣೆ ಮಾಡುತ್ತಿದೆ. ಸಿಬಿಐ ತನಿಖೆ ತಡೆಗೆ ಈಗಾಗಲೇ ಇವರು ನ್ಯಾಯಾಲಯಕ್ಕೆ ಹೋಗಿದ್ದು, ಅಲ್ಲಿ ತನಿಖೆ ಮುಂದುವರೆಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲಿ ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಈಗ ಸಚಿವ ಸಂಪುಟದಲ್ಲಿ ಕೇಸ್ ವಾಪಸ್ ಪಡೆಯಲು ತೀರ್ಮಾನ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನವೆಂದು ಹೇಳಿದರು.

ಇಂತಹ ಅಪರಾಧ ಮಾಡಿದವರ ವಿರುದ್ಧ ಈಗಾಗಲೇ ದಾಖಲಾಗಿದ್ದ ಪ್ರಕರಣಗಳಲ್ಲಿ ವಿಚಾರಣೆ ನಡೆದು ಶಿಕ್ಷೆಯಾಗಿದೆ. ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಹೀಗಿದ್ದರೂ ಡಿಕೆಶಿ ಮೇಲಿನ ಪ್ರಕರಣ ವಾಪಸ್ ಸಂವಿಧಾನ ಬಾಹಿರ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!