ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ದುಬೈ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮತ್ತು ಅಬುಧಾಬಿಯ ದೊರೆ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಆಹ್ವಾನದ ಮೇರೆಗೆ ಮೋದಿ ಶೃಂಗಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಎಂಇಎ ಹೇಳಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನವೆಂಬರ್ 30 ರಿಂದ ಡಿಸೆಂಬರ್ 1ರ ವರೆಗೆ ದುಬೈ ಪ್ರವಾಸದಲ್ಲಿರಲಿದ್ದಾರೆ.
ಜಾಗತಿಕ ಹವಾಮಾನ ಕ್ರಿಯಾ ಶೃಂಗಸಭೆಯು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶದ (ಯುಎನ್ಎಫ್ಸಿಸಿಸಿ) ಪಕ್ಷಗಳ 28ನೇ ಸಮ್ಮೇಳನದ (ಸಿಒಪಿ -28) ಉನ್ನತ ಮಟ್ಟದ ವಿಭಾಗವಾಗಿದೆ. ಯುಎಇ ಅಧ್ಯಕ್ಷತೆಯಲ್ಲಿ ನ.28 ರಿಂದ ಡಿ.12ರ ವರೆಗೆ ಸಭೆ ನಡೆಯಲಿದೆ.
ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.